ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಹಣ ಇಲ್ಲದಿದ್ದರೆ ದಂಡ: ಎ.1ರಿಂದ ಜಾರಿ
ಬ್ಯಾಂಕ್ ಗ್ರಾಹಕರ ಮೇಲೆ ಮತ್ತೊಂದು ಪ್ರಹಾರ

ಹೊಸದಿಲ್ಲಿ, ಮಾ.3: ತಿಂಗಳಿಗೆ ಮೂರಕ್ಕಿಂತ ಹೆಚ್ಚು ಬಾರಿ ನಗದು ವ್ಯವಹಾರ ನಡೆಸುವ ಗ್ರಾಹಕರಿಗೆ ಶುಲ್ಕ ವಿಧಿಸುವ ನಿರ್ಧಾರದ ಬೆನ್ನಲ್ಲೇ, ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗ್ರಾಹಕರಿಗೆ ಮತ್ತೊಂದು ಪ್ರಹಾರ ನೀಡಿದೆ. ತಮ್ಮ ಬ್ಯಾಂಕ್ ಖಾತೆಯಲ್ಲಿ ನಿಗದಿತ ಕನಿಷ್ಠ ಮೊತ್ತ(ಮಿನಿಮಮ್ ಬ್ಯಾಲೆನ್ಸ್) ಉಳಿಸಿಕೊಳ್ಳದ ಗ್ರಾಹಕರಿಗೆ ದಂಡ ವಿಧಿಸುವುದಾಗಿ ಪ್ರಕಟಿಸಿದ್ದು ಎಪ್ರಿಲ್ 1ರಿಂದ ಈ ನಿಯಮ ಜಾರಿಗೆ ಬರಲಿದೆ.
ಮಹಾನಗರ (ಮೆಟ್ರೊಪಾಲಿಟನ್) ಪ್ರದೇಶದ ಬ್ಯಾಂಕ್‌ಗಳ ಖಾತೆದಾರರಿಗೆ 5 ಸಾವಿರ ರೂ, ನಗರ ಪ್ರದೇಶದ ಖಾತೆದಾರರಿಗೆ 3 ಸಾವಿರ ರೂ. , ಅರೆ ನಗರ(ಸೆಮಿ ಅರ್ಬನ್) ಪ್ರದೇಶದ ಖಾತೆದಾರರಿಗೆ 2 ಸಾವಿರ ರೂ. ಮತ್ತು ಗ್ರಾಮೀಣ ಪ್ರದೇಶದ ಖಾತೆದಾರರಿಗೆ 1 ಸಾವಿರ ರೂ. ನಿಗದಿತ ಕನಿಷ್ಠ ಮೊತ್ತ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಪ್ರಕಟಣೆ ತಿಳಿಸಿದೆ.
ಈ ಕನಿಷ್ಠ ಮೊತ್ತವನ್ನು ಹೊಂದಿರದ ಖಾತೆದಾರರ ಮೇಲೆ ದಂಡ ವಿಧಿಸಲಾಗುತ್ತದೆ. ಮಹಾನಗರ ಪ್ರದೇಶದ ಖಾತೆದಾರರು ನಿಗದಿತ ಕನಿಷ್ಠ ಮೊತ್ತಕ್ಕಿಂತ ಶೇ.75ರಷ್ಟು ಕಡಿಮೆ ಹಣವನ್ನು ತಮ್ಮ ಖಾತೆಯಲ್ಲಿ ಹೊಂದಿದ್ದರೆ ಅವರ ಮೇಲೆ 100 ರೂ., ಜೊತೆಗೆ ಸೇವಾ ತೆರಿಗೆ ವಿಧಿಸಲಾಗುತ್ತದೆ. ಶೇ.50ರಿಂದ 75ರಷ್ಟು ಕಡಿಮೆಯಿದ್ದರೆ 75 ರೂ., ಜೊತೆಗೆ ಸೇವಾ ತೆರಿಗೆ, ಶೇ.50ಕ್ಕಿಂತ ಕಡಿಮೆಯಿದ್ದರೆ 50 ರೂ, ಜೊತೆಗೆ ಸೇವಾ ತೆರಿಗೆ ವಿಧಿಸಲಾಗುತ್ತದೆ.
ಗ್ರಾಮೀಣ ಪ್ರದೇಶದಲ್ಲಿ ಈ ದಂಡದ ಮೊತ್ತ ರೂ.20ರಿಂದ 50ರವರೆಗೆ (ಜೊತೆಗೆ ಸೇವಾ ತೆರಿಗೆ ) ಆಗಿರುತ್ತದೆ. ಈ ನಿಯಮ ಎಪ್ರಿಲ್ 1ರಿಂದ ಜಾರಿಗೆ ಬರಲಿದೆ. ಅಲ್ಲದೆ ಇನ್ನು ಮುಂದೆ ತಿಂಗಳಿಗೆ ಮೂರಕ್ಕಿಂತ ಹೆಚ್ಚು ಬಾರಿ ಖಾತೆಯಲ್ಲಿ ಹಣದ ವ್ಯವಹಾರ ನಡೆಸಿದರೆ ಪ್ರತೀ ವ್ಯವಹಾರಕ್ಕೆ 50 ರೂ. ಶುಲ್ಕ ವಿಧಿಸಲಾಗುವುದು.
ಶಾಖೆಗಳಲ್ಲಿ ಹಣದ ವ್ಯವಹಾರ ನಡೆಸುವಾಗ ಶುಲ್ಕ ವಿಧಿಸುವ ಕ್ರಮ ಈಗಲೂ ಚಾಲ್ತಿಯಲ್ಲಿದೆ. ಅದನ್ನು ಮುಂದಿನ ಆರ್ಥಿಕ ವರ್ಷಕ್ಕೂ ನವೀಕರಿಸಲಾಗಿದೆ ಅಷ್ಟೆ. ನಗದುರಹಿತ ವ್ಯವಹಾರಕ್ಕೆ ಉತ್ತೇಜನ ನೀಡುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಗ್ರಾಹಕರು ಬ್ಯಾಂಕ್‌ಗಳಿಗೆ ಆಗಿಂದಾಗ್ಗೆ ಭೇಟಿ ನೀಡುವ ಶ್ರಮವನ್ನು ಕಡಿಮೆ ಮಾಡುವ ಉದ್ದೇಶದಿಂದ ಎಟಿಎಂ ಮೂಲಕ ತಿಂಗಳಿಗೆ 10 ಬಾರಿ ಉಚಿತವಾಗಿ ಹಣ ಹಿಂಪಡೆಯುವ ಅವಕಾಶ ಕಲ್ಪಿಸಲಾಗಿದೆ ಎಂದು ಎಸ್‌ಬಿಐ ಅಧಿಕಾರಿಯೋರ್ವರು ತಿಳಿಸಿದ್ದಾರೆ.