ಪಿಣರಾಯಿ ತಲೆಗೆ ಕೋ.ರೂ. ಘೋಷಿಸಿದ್ದ ಚಂದ್ರಾವತ್ ಆರೆಸ್ಸೆಸ್‌ನಿಂದ ವಜಾ
ಹೊಸದಿಲ್ಲಿ, ಮಾ.3: ಮಧ್ಯಪ್ರದೇಶದ ಉಜ್ಜೈನ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತಲೆಗೆ ಒಂದು ಕೋ.ರೂ. ಬಹುಮಾನವನ್ನು ಘೋಷಿಸಿದ್ದ ಸಹ ಪ್ರಚಾರ ಪ್ರಮುಖ್ ಚಂದನ್ ಚಂದ್ರಾವತ್‌ರನ್ನು ಆರೆಸ್ಸೆಸ್ ಶುಕ್ರವಾರ ಉಚ್ಚಾಟಿಸಿದೆ. ಈ ಘೋಷಣೆಯ ಜೊತೆಗೆ ಚಂದ್ರಾವತ್ ಗುರುವಾರ 2002ರ ಗುಜರಾತ್ ಕೋಮು ಗಲಭೆ ಕುರಿತಂತೆ ಅತ್ಯಂತ ವಿಭಜನಕಾರಿ ಹೇಳಿಕೆಯನ್ನೂ ನೀಡಿದ್ದು, ಇದಕ್ಕೆ ಆರೆಸ್ಸೆಸ್ ಸೇರಿದಂತೆ ಎಲ್ಲ ವರ್ಗಗಳಿಂದ ವ್ಯಾಪಕ ಖಂಡನೆಗಳು ವ್ಯಕ್ತವಾಗಿದ್ದವು.
ಚಂದ್ರಾವತ್‌ರನ್ನು ಸಂಘದಲ್ಲಿಯ ಎಲ್ಲ ಹೊಣೆಗಾರಿಕೆಗಳಿಂದ ಮುಕ್ತಗೊಳಿಸಲಾಗಿದೆ ಮತ್ತು ತಾನು ಹಿಂಸೆಯಲ್ಲಿ ನಂಬಿಕೆಯನ್ನು ಹೊಂದಿಲ್ಲ ಎಂದು ಆರೆಸ್ಸೆಸ್ ಹೇಳಿಕೆಯಲ್ಲಿ ತಿಳಿಸಿದೆ. ಇದಕ್ಕೂ ಮುನ್ನ ತನ್ನ ಹೇಳಿಕೆಯನ್ನು ಹಿಂದೆಗೆದುಕೊಂಡಿದ್ದ ಚಂದ್ರಾವತ್ ಅದಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದರು.
ಅತ್ತ ಪಿಣರಾಯಿ ವಿಜಯನ್ ಅವರು ತನಗೆ ಬೆದರಿಕೆಯನ್ನು ತಳ್ಳಿಹಾಕಿದ್ದು, ಯಾವುದೇ ಬೆದರಿಕೆಯು ದೇಶದಲ್ಲಿ ಪ್ರವಾಸ ಮಾಡದಂತೆ ತನ್ನನ್ನು ತಡೆಯುವುದಿಲ್ಲ ಎಂದ ಹೇಳಿದ್ದಾರೆ.