ನಿಗೂಢವಾಗಿ ಮೃತಪಟ್ಟಿರುವ ಯೋಧ ಮ್ಯಾಥ್ಯೂ ಡೈರಿಯಲ್ಲಿ ಬರೆದಿದ್ದೇನು?

ಹೊಸದಿಲ್ಲಿ, ಮಾ.4: ಸೇನೆಯ ಯೋಧ ರಾಯ್ ಮ್ಯಾಥ್ಯೂ ಅವರ ನಿಗೂಢ ಸಾವಿಗೆ ಕಾರಣವಾದ ಅಂಶ, ಇದೀಗ ಪತ್ತೆಯಾಗಿರುವ ಡೈರಿಯಿಂದ ಬೆಳಕಿಗೆ ಬರುವ ಸಾಧ್ಯತೆ ಇದೆ.
ಸೇನೆಯ ಸಹಾಯಕ ಅಥವಾ ಬಡ್ಡಿ (ಆರ್ಡರ್ಲಿ) ವ್ಯವಸ್ಥೆಯನ್ನು ಸುದ್ದಿ ವೆಬ್‌ಸೈಟ್ ಒಂದರ ರಹಸ್ಯ ಕಾರ್ಯಾಚರಣೆಯಿಂದ ಬಯಲುಗೊಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಿಟ್ಟ ಕೆಲ ದಿನಗಳ ಬಳಿಕ ಮ್ಯಾಥ್ಯೂ ಶವವಾಗಿ ಪತ್ತೆಯಾಗಿದ್ದ. ಇದೀಗ ಯೋಧನ ದಿನಚರಿ ಪುಸ್ತಕವೊಂದು ಪತ್ತೆಯಾಗಿದ್ದು, ರಹಸ್ಯ ಕಾರ್ಯಾಚರಣೆ ವೀಡಿಯೊದಲ್ಲಿನ ಧ್ವನಿ ತನ್ನದಲ್ಲ ಎಂದು ಇದರಲ್ಲಿ ಹೇಳಿಕೊಂಡಿದ್ದಾರೆ.
ಈ ಡೈರಿಯಲ್ಲಿ ಬರೆದಿರುವುದನ್ನು ಆತ್ಮಹತ್ಯೆ ಟಿಪ್ಪಣಿ ಎಂದು ಪರಿಗಣಿಸಲಾಗಿದ್ದು, ಈಗ ಅದು ಪೊಲೀಸರ ವಶದಲ್ಲಿದೆ. ಮಲೆಯಾಳಂನಲ್ಲಿ ಈ ಡೈರಿ ಬರೆಯಲಾಗಿದ್ದು, "ಕೋರ್ಟ್ ಮಾರ್ಷಲ್ ಎದುರಿಸುವುದಕ್ಕಿಂತ ಸಾಯುವುದೇ ಲೇಸು" ಎಂಬ ಬರಹವಿದೆ.
ಡೈರಿಯಲ್ಲಿ ಪತ್ನಿ ಹಾಗೂ ಕುಟುಂಬದ ಇತರ ಸದಸ್ಯರ ಕ್ಷಮೆ ಯಾಚಿಸಲಾಗಿದೆ. ಜತೆಗೆ ತಮ್ಮ ಮೇಲಧಿಕಾರಿ ಕರ್ನಲ್ ಅವರ ಕ್ಷಮೆಯನ್ನೂ ಯಾಚಿಸಿದ್ದಾರೆ.
ಈ ಮಧ್ಯೆ ನಾಶಿಕ್ ಪೊಲೀಸರು, ರಾಯ್ ಅವರ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಇತರ ಯೋಧರನ್ನೂ ವಿಚಾರಣೆಗೆ ಗುರಿಪಡಿಸಿದ್ದಾರೆ. ರಹಸ್ಯ ಕಾರ್ಯಾಚರಣೆ ನಡೆಸಿದ ಪತ್ರಕರ್ತನನ್ನೂ ಪ್ರಶ್ನಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಯೋಧನ ಪತ್ನಿ ಫಿನಿ ಹೇಳಿಕೆಯನ್ನು ಕೂಡಾ ದಾಖಲಿಸಿಕೊಳ್ಳಲಿದ್ದು, ಕೊನೆಯದಾಗಿ ಫೋನ್ ಸಂಭಾಷಣೆಯಲ್ಲಿ ಏನು ಹೇಳಿದ್ದರು ಎನ್ನುವುದು ಇದರಿಂದ ತಿಳಿಯಲಿದೆ.