ಭಾರತದಲ್ಲಿ ಉಳಿತಾಯದ ಹಣ ಕಳಕೊಂಡ ಮಹಿಳೆಗೆ ಅಮೆರಿಕದಿಂದ ಬಂತು ಸಹಾಯ!

ಶಹಾಜಹಾನ್ಪುರ, ಮಾ.4: ಗಿಡುಗ ಹಾರಾಡುವ ವೇಳೆ ತನ್ನ ಜೀವಮಾನದ ಉಳಿತಾಯ ಹಣವೆಲ್ಲವನ್ನೂ ಕಳೆದುಕೊಂಡ ದಿನಗೂಲಿ ಮಹಿಳೆಯೊಬ್ಬರಿಗೆ 13 ಸಾವಿರ ಕಿಲೋಮೀಟರ್ ದೂರದ ಅಮೆರಿಕದ ವ್ಯಕ್ತಿಯೊಬ್ಬರು ಸಹಾಯಹಸ್ತ ಚಾಚಿದ ಅಪರೂಪದ ಘಟನೆ ವರದಿಯಾಗಿದೆ.
ಮಾರ್ಚ್ 5ರಂದು ನಡೆಯುವ ಮಗಳ ಮದುವೆಗಾಗಿ ಫೆಬ್ರವರಿ 23ರಂದು ಬ್ಯಾಂಕಿಗೆ ಬಂದಿದ್ದ ನೂರ್ಜಹಾನ್ ಎಂಬ ಮಹಿಳೆ, 20 ಸಾವಿರ ರೂಪಾಯಿಯನ್ನು ಬ್ಯಾಂಕಿನಿಂದ ಪಡೆದು ಹೊರಬರುತ್ತಿರುವಾಗ ಗಿಡುಗವೊಂದು ಮುಗಿಬಿದ್ದು, ಮಹಿಳೆಯ ಪರ್ಸ್ ಎತ್ತಿಕೊಂಡು ಹೋಯಿತು.
ಈ ಕುರಿತ ವರದಿ ಟೆಕ್ಸಸ್ ನಿವಾಸಿ ಉಸ್ಮಾನ್ ಖಾನ್ ಎಂಬವರ ಗಮನ ಸೆಳೆಯಿತು. ಸೆಕೆಂಡ್ಹ್ಯಾಂಡ್ ಕಾರು ಮಾರುವ ಖಾನ್, ಉತ್ತರ ಪ್ರದೇಶ ಪೊಲೀಸರ ಸಹಾಯ ಪಡೆದು ನೂರ್ಜಹಾನ್ ಅವರನ್ನು ಪತ್ತೆ ಮಾಡಿ 500 ಡಾಲರ್ (ಸುಮಾರು 33 ಸಾವಿರ ರೂಪಾಯಿ) ನೀಡಿದರು. ಇದರಿಂದಾಗಿ ನಿಂತುಹೋಗಲಿದ್ದ ಮಗಳ ಮದುವೆ ಸಾಂಗವಾಗಿ ನೆರವೇರುವುದು ಸಾಧ್ಯವಾಗಿದೆ.
Next Story