ವಿದೇಶಾಂಗ ನೀತಿಯಲ್ಲಿ ಮಹತ್ವದ ಬದಲಾವಣೆ: ಇಸ್ರೇಲ್‌ಗೆ ಮಾತ್ರ ಮೋದಿ ಭೇಟಿ, ಪೆಲೆಸ್ತೀನ್‌ಗೆ ಇಲ್ಲ

ಹೊಸದಿಲ್ಲಿ, ಮಾ.4: ಈ ವರ್ಷದ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್‌ಗೆ ಭೇಟಿ ನೀಡುವ ಅವಧಿಯಲ್ಲಿ ಪ್ಯಾಲೆಸ್ತೀನ್ ಪ್ರವಾಸ ಕೈಗೊಳ್ಳದಿರಲು ನಿರ್ಧರಿಸಿದ್ದಾರೆ. ಮೋದಿಯವರ ಇಸ್ರೇಲ್ ಪ್ರವಾಸ ಐತಿಹಾಸಿಕ ಭೇಟಿಯಾಗಲಿದ್ದು, ಇಸ್ರೇಲ್‌ಗೆ ಭೇಟಿ ನೀಡುವ ಪ್ರಪ್ರಥಮ ಭಾರತೀಯ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ. ಆದರೆ ಇಸ್ರೇಲ್‌ಗೆ ಈ ಹಿಂದೆ ಭೇಟಿ ನೀಡಿದ್ದ ಇತರ ಸಚಿವರಂತೆ ಮೋದಿ ಕೂಡಾ ಪ್ಯಾಲೆಸ್ತೀನ್‌ಗೆ ಭೇಟಿ ನೀಡಲಿದ್ದಾರೆ ಎಂದೂ ಹೇಳಲಾಗುತ್ತಿದೆ.
ಭಾರತದ ವಿದೇಶಾಂಗ ನೀತಿಯಲ್ಲಿ ಸಮತೋಲನ ತರುವ ದೃಷ್ಟಿಯಿಂದ ಇಸ್ರೇಲ್‌ಗೆ ಭೇಟಿ ನೀಡುವ ಮುನ್ನ ಮೋದಿ ಪ್ಯಾಲೆಸ್ತೀನ್ ಅಧ್ಯಕ್ಷ ಮುಹಮ್ಮದ್ ಅಬ್ಬಾಸ್ ಅವರಿಗೆ ಆತಿಥ್ಯ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
"ಮೋದಿಯವರು ತಮ್ಮ ಇಸ್ರೇಲ್ ಪ್ರವಾಸದ ವೇಳೆ ಪ್ಯಾಲೆಸ್ತೀನ್‌ಗೆ ಭೇಟಿ ನೀಡುತ್ತಿಲ್ಲ. ಬದಲು ನಮ್ಮ ಅಧ್ಯಕ್ಷರು ಈ ವರ್ಷ ಭಾರತಕ್ಕೆ ಭೇಟಿ ನೀಡಲಿದ್ದಾರೆ" ಎಂದು ಪ್ಯಾಲೆಸ್ತೀನ್‌ನ ರಾಯಭಾರಿ ಅದ್ನಾನ್ ಅಬು ಅಲ್‌ಹಜ್ ಖಚಿತಪಡಿಸಿದ್ದಾರೆ. ಜುಲೈ 2ನೇ ವಾರ ಹಂಬರ್ಗ್‌ನಲ್ಲಿ ನಡೆಯುವ ಜಿ-20 ಶೃಂಗದಿಂದ ವಾಪಸ್ಸಾಗುವ ಮಾರ್ಗ ಮಧ್ಯದಲ್ಲಿ ಮೋದಿ ಇಸ್ರೇಲ್‌ಗೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿದೆ.
ಭಾರತದ ಪ್ರಧಾನಿ ಇಸ್ರೇಲ್‌ಗೆ ಭೇಟಿ ನೀಡುವುದು, ಈ ಯಹೂದಿ ದೇಶದ ಜತೆಗಿನ ಭಾರತದ ವಿಶೇಷ ಬಾಂಧವ್ಯದ ಧ್ಯೋತಕ ಎಂದು ಹೇಳಲಾಗುತ್ತಿದೆ. ಉಭಯ ದೇಶಗಳ ಸಂಪೂರ್ಣ ರಾಜತಾಂತ್ರಿಕ ಸಂಬಂಧ ಆರಂಭವಾದ 25ನೇ ವರ್ಷಾಚರಣೆಯನ್ನೂ ಅದ್ದೂರಿಯಾಗಿ ಹಮ್ಮಿಕೊಳ್ಳಲು ಉಭಯ ದೇಶಗಳು ನಿರ್ಧರಿಸಿವೆ.