ಭಾರೀ ತೂಕದಿಂದ ತಮಾಷೆಗೆ ಗುರಿಯಾಗಿದ್ದ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಉಚಿತ ಶಸ್ತ್ರಚಿಕಿತ್ಸೆ

ಮುಂಬೈ, ಮಾ.4: ಭಾರೀ ತೂಕದಿಂದಾಗಿ ‘ಪೇಜ್ ತ್ರಿ’ ಅಂಕಣಕಾರ್ತಿ ಶೋಭಾ ಡೇ ಅವರಿಂದ ಟ್ವಿಟ್ಟರ್‌ನಲ್ಲಿ ತಮಾಷೆಗೆ ಗುರಿಯಾಗಿದ್ದ ಮಧ್ಯಪ್ರದೇಶದ ಪೊಲೀಸ್ ಇನ್ಸ್‌ಪೆಕ್ಟರ್‌ವೊಬ್ಬರು ಮುಂಬೈನ ಸೈಫೀ ಆಸ್ಪತ್ರೆಯಲ್ಲಿ ಉಚಿತವಾಗಿ ತೂಕ ಕಡಿಮೆ ಮಾಡುವ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.
180 ಕೆಜಿ ತೂಕದ, ನಿವೃತ್ತಿಯ ಅಂಚಿನಲ್ಲಿರುವ ಇನ್ಸ್‌ಪೆಕ್ಟರ್ ದೌಲತ್‌ರಾಮ್ ಜೊಗವಾತ್ ತೂಕ ಕಡಿಮೆಕೊಳ್ಳಲು ಮುಂಬೈಗೆ ರವಿವಾರ ಆಗಮಿಸಿದ್ದರು. ಸೈಫೀ ಆಸ್ಪತ್ರೆಯ ವೈದ್ಯ ಡಾ.ಮುಫಝ್ಜಲ್ ಲಕ್ಡಾವಾಲಾ ಅವರು ಬೊಜ್ಜಿನ ಸಮಸ್ಯೆ ಎದುರಿಸುತ್ತಿರುವ ದೌಲತ್‌ರಾಮ್‌ಗೆ ಗುರುವಾರ ಉಚಿತವಾಗಿ ಬಾರಿಯಾಟ್ರಿಕ್ ಸರ್ಜರಿ ಮಾಡಿದ್ದಾರೆ. ಸರ್ಜರಿ ಬಳಿಕ ಅವರ ಆರೋಗ್ಯ ಸ್ಥಿರವಾಗಿದೆ.
‘‘ದೌಲತ್‌ರಾಮ್ ಇನ್ನು ಒಂದು ವರ್ಷದೊಳಗೆ 80 ಕೆಜಿ ತೂಕ ಕಳೆದುಕೊಳ್ಳಲಿದ್ದಾರೆ. ಅವರಿಗೆ ನಡೆಸಿರುವ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ರವಿವಾರವೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. ದೌಲತ್‌ರಾಮ್ ಫೆ.26 ರಂದು ನಮ್ಮ ಆಸ್ಪತ್ರೆಗೆ ದಾಖಲಾಗಿದ್ದರು. ನಾವು ಅವರ ಇಡೀ ದೇಹದ ತಪಾಸಣೆ ನಡೆಸಿದ್ದೇವೆ. ಮಧುಮೇಹ, ರಕ್ತದೊತ್ತಡ ಸಹಿತ ಅವರು ಕೆಲವು ವರ್ಷಗಳಿಂದ ಎದುರಿಸುತ್ತಿರುವ ಆರೋಗ್ಯದ ಸಮಸ್ಯೆಯ ಪರೀಕ್ಷೆ ನಡೆಸಿದ್ದೇವೆ’’ ಎಂದು ಡಾ. ಲಕ್ಡಾವಾಲಾ ತಿಳಿಸಿದ್ದಾರೆ.
ಡಾ. ಲಕ್ಡಾವಾಲಾ ಅವರು ಈಜಿಪ್ಟ್‌ನ ವಿಶ್ವದ ಅತ್ಯಂತ ಭಾರದ ಮಹಿಳೆಯ ತೂಕ ಕಡಿಮೆ ಮಾಡುವ ಸಾಹಸಕ್ಕೆ ಕೈಹಾಕಿದ್ದಾರೆ. ಈಗಾಗಲೇ ಈಜಿಪ್ಟ್ ಮಹಿಳೆಯನ್ನು ಮುಂಬೈಗೆ ಕರೆ ತರಲಾಗಿದ್ದು, ಆಕೆಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ.