ನೀವು ಇಳಿಯುತ್ತಿರುವ ಈಜುಕೊಳದಲ್ಲಿ ಎಷ್ಟು ಮೂತ್ರವಿದೆ?

ಟೊರಂಟೋ, ಮಾ.4: ಈಜುಕೊಳವೊಂದರಲ್ಲಿ ಎಷ್ಟು ಮೂತ್ರವಿದೆಯೆಂದು ತಿಳಿಯಲು ಕೆನಡಾದ ಸಂಶೋಧಕರು ಒಂದು ವಿಧಾನ ಕಂಡುಕೊಂಡಿದ್ದು, ಅವರು ನಡೆಸಿದ ಪರೀಕ್ಷೆಯ ಪ್ರಕಾರ ಕೆಲವು ಈಜುಕೊಳಗಳಲ್ಲಿ ಶೇ.0.01ರಷ್ಟು ಮೂತ್ರವಿರುತ್ತದೆ. ಇದು ತೀರಾ ಸಣ್ಣ ಪ್ರಮಾಣವಾದರೂ ಈಜುಗಾರರಿಗೆ ಆರೋಗ್ಯ ಸಮಸ್ಯೆ ಸೃಷ್ಟಿಸಲು ಇದೇ ಸಾಕು.
ಇನ್ನೊಂದು ಪರೀಕ್ಷೆಯಲ್ಲಿ ಸಂಶೋಧಕರು ಕಂಡುಕೊಂಡಂತೆ ಸರಾಸರಿ 833,000 ಲೀಟರ್ ನೀರಿರುವ ಈಜುಕೊಳವೊಂದರಲ್ಲಿ 75 ಲೀಟರ್ ಮೂತ್ರವಿರಬಹುದು. ಸಣ್ಣ ಈಜುಕೊಳವೊಂದರಲ್ಲಿ 4,16,000 ಲೀಟರ್ ನೀರಿದ್ದರೆ ಅದರಲ್ಲಿ ಸರಿಸುಮಾರು 30 ಲೀಟರಿನಷ್ಟು ಮೂತ್ರವಿರಬಹುದೆಂದು ಅಂದಾಜಿಸಲಾಗಿದೆ.
ಅಲ್ಬೆರ್ಟಾ ವಿಶ್ವವಿದ್ಯಾನಿಲಯದ ಸಂಶೋಧಕರು 250ಕ್ಕೂ ಹೆಚ್ಚು ಮಾದರಿಗಳನ್ನು 31 ಈಜುಕೊಳಗಳು ಮತ್ತು ಹಾಟ್ ಟಬ್ಬುಗಳಿಂದ ಪಡೆದು ಪರೀಕ್ಷಿಸಿದ್ದರು. ಈ ಮಾದರಿಗಳನ್ನು ಕೆನಡಾದ ಎರಡು ನಗರಗಳಲ್ಲಿರುವ ಖಾಸಗಿ ಮತ್ತು ಸರಕಾರಿ ಈಜುಕೊಳಗಳಿಂದ ಪಡೆಯಲಾಗಿದ್ದು ಈ ನಗರಗಳ ಹೆಸರುಗಳನ್ನು ಬಹಿರಂಗ ಪಡಿಸಲಾಗಿಲ್ಲ.
ಮೂತ್ರದ ಮೂಲಕ ಹೊರಬರುವ ಕೃತಕ ಸಿಹಿಕಾರಕ ಏಸಲ್ಫೇಮ್ ಪೊಟಾಶಿಯಂ ಮೂಲಕ ಸಂಶೋಧಕರು ತಮ್ಮ ಪರೀಕ್ಷೆ ನಡೆಸಿದ್ದು ಎಲ್ಲಾ ಮಾದರಿಗಳಲ್ಲೂ ಅದು ಪತ್ತೆಯಾಗಿತ್ತು. ಈಜುಕೊಳದಲ್ಲಿ ಮೂತ್ರ ಮಾಡಬಾರದೆಂಬ ನಿಯಮವಿದ್ದರೂ ಶೇ 19ರಷ್ಟು ವಯಸ್ಕರು ತಾವು ಈಜುಕೊಳದಲ್ಲಿ ಕನಿಷ್ಠ ಒಮ್ಮೆಯಾದರೂ ಮೂತ್ರ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.
ಈಜುಕೊಳದ ನೀರಿಗೆ ಕ್ಲೋರಿನ್ ಮಿಶ್ರಣ ಮಾಡಿದಾಗ ಹಾಗೂ ಅದು ಈ ಮೂತ್ರವನ್ನು ಸೇರಿಕೊಂಡಾಗ ಈಜುಗಾರರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನುತ್ತಾರೆ ತಜ್ಞರು.
ಇತ್ತೀಚೆಗೆ ರಿಯೋ ಒಲಿಂಪಿಕ್ಸ್ ನ ಡೈವಿಂಗ್ ಪೂಲ್ ನೀರು ಹಳದಿ ಬಣ್ಣಕ್ಕೆ ತಿರುಗಿರುವುದು ಈಜುಕೊಳಗಳ ನೀರಿನ ಗುಣಮಟ್ಟವನ್ನು ಪರೀಕ್ಷಿಸುವ ಅಗತ್ಯವಿದೆ ಎಂಬುದನ್ನು ಸ್ಪಷ್ಟ ಪಡಿಸುತ್ತದೆ ಎನ್ನುತ್ತಾರೆ ತಜ್ಞರು.







