ಹುಸಿ ‘ಬಾಂಬು’ ಸಿಡಿಸಿ ಪೊಲೀಸರ ಅತಿಥಿಯಾದ ರೂಪದರ್ಶಿ!

ಮುಂಬೈ,ಮಾ.4: ತನ್ನ ಸ್ನೇಹಿತೆಯ ಬ್ಯಾಗ್‌ನಲ್ಲಿ ಬಾಂಬ್ ಇದೆ. ಅದನ್ನು ಎಚ್ಚರಿಕೆಯಿಂದ ತಪಾಸಣೆ ಮಾಡಿ ಎಂದು ಭದ್ರತಾ ಸಿಬ್ಬಂದಿಗೆ ತಿಳಿಸಿ ಸಹಾರ ವಿಮಾನ ನಿಲ್ದಾಣದಲ್ಲಿ ಕೆಲಹೊತ್ತು ಆತಂಕದ ವಾತಾವರಣ ಸೃಷ್ಟಿಸಿದ್ದ ಮುಂಬೈ ಮಹಿಳೆಯೊಬ್ಬರನ್ನು ಗುರುವಾರ ರಾತ್ರಿ ಬಂಧಿಸಲಾಗಿದೆ. ಬಂಧಿತ ಮಹಿಳೆ ತನ್ನ ತಪ್ಪನ್ನು ಸಮರ್ಥಿಸಿಕೊಳ್ಳಲು ಸಿಐಎಸ್‌ಎಫ್ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದಾಳೆ.
ರೂಪದರ್ಶಿ ಕಾಂಚನಾ ಠಾಕೂರ್(27 ವರ್ಷ) ತಮಾಷೆಯ ಬಾಂಬು ಸಿಡಿಸಿದ ಕಾರಣ ಏರ್‌ಇಂಡಿಯಾದ ವಿಮಾನ ಸುಮಾರು ಒಂದು ಗಂಟೆ ತಡವಾಗಿ ದಿಲ್ಲಿಗೆ ಪ್ರಯಾಣ ಬೆಳೆಸಿತು. ಸ್ನೇಹಿತೆಯ ಬ್ಯಾಗ್‌ನಲ್ಲಿ ಬಾಂಬಿದೆ ಎಂದು ಹೇಳಿ ಪ್ರಯಾಣಿಕರಿಗೆ, ಸಾರ್ವಜನಿಕರ ಜೀವಕ್ಕೆ ಅಪಾಯ ತರುವ ರೀತಿಯಲ್ಲಿ ವರ್ತಿಸಿದ ಕಾರಣಕ್ಕೆ ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದ್ದು, ಮಹಿಳೆಗೆ ಮೂರು ವರ್ಷ ಜೈಲು ಸಜೆಯಾಗುವ ಸಾಧ್ಯತೆಯಿದೆ.
ಗುರುವಾರ ರಾತ್ರಿ 8 ಗಂಟೆಗೆ ಏರ್‌ಇಂಡಿಯಾ 101ರಲ್ಲಿ ಪ್ರಯಾಣಿಸಲು ಕಾಂಚನಾ ಇತರ ಮೂವರು ಸ್ನೇಹಿತೆಯರೊಂದಿಗೆ ಸರದಿಸಾಲಲ್ಲಿ ನಿಂತಿದ್ದರು. ಮೊದಲಿಗೆ ಬೋರ್ಡಿಂಗ್ ಗೇಟ್ ದಾಟಿದ ಕಾಂಚನಾ ತನ್ನ ಸ್ನೇಹಿತೆಯರತ್ತ ತಿರುಗಿ ಆಕೆಯ ಬ್ಯಾಗಿನಲ್ಲಿ ಬಾಂಬಿದೆ. ಬ್ಯಾಗನ್ನು ಚೆಕ್‌ಮಾಡಿ ಎಂದು ಭದ್ರತಾ ಸಿಬ್ಬಂದಿಗೆ ಹೇಳಿದ್ದರು. ಇದರಿಂದ ತಕ್ಷಣವೇ ಜಾಗೃತರಾದ ವಿಮಾನ ಭದ್ರತಾ ಸಿಬ್ಬಂದಿ ಸಿಐಎಸ್‌ಎಫ್ ಹಾಗೂ ಏರ್‌ಪೋರ್ಟ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದರು.
ಆರಂಭಿಕ ವಿಚಾರಣೆಯಲ್ಲಿ ಸಿಐಎಸ್‌ಎಫ್ ಆರೋಪಿ ಮಹಿಳೆ ಸೇರಿದಂತೆ ನಾಲ್ವರ ಬ್ಯಾಗ್‌ನ್ನು ತಪಾಸಣೆ ನಡೆಸಿದರು. ಆಗ ಆರೋಪಿ ಕಾಂಚನಾ ತಾನು ತಮಾಷೆಗಾಗಿ ಹೀಗೆ ಮಾಡಿದ್ದೇನೆಂದು ಬಾಯ್ಬಿಟ್ಟರು. ಭದ್ರತಾ ಅಧಿಕಾರಿಗಳು ಕಾಂಚನಾರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡರು. ಕಾಂಚನಾ ಸಹಿತ ಇತರ ಮೂವರನ್ನು ಪೊಲೀಸರು ವಶಕ್ಕೆ ಪಡೆದರು. ನಗರ ಬಿಟ್ಟು ತೆರಳದಂತೆ ಸೂಚಿಸಿದರು. ರಾತ್ರಿ 9 ಗಂಟೆಗೆ ದಿಲ್ಲಿಗೆ ತೆರಳಬೇಕಾಗಿದ್ದ ವಿಮಾನ 10 ಗಂಟೆಗೆ ನಿರ್ಗಮಿಸಿತು.
ಸಿಐಎಸ್‌ಎಫ್ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ಠಾಕೂರ್,‘‘ನಿಜವಾದ ಭಯೋತ್ಪಾದಕರು ವಿಮಾನದಲ್ಲಿದ್ದರೂ ನೀವು ಏನೂ ಮಾಡುವುದಿಲ್ಲ. ನಾನು ಕೇವಲ ತಮಾಷೆ ಮಾಡಿದ್ದಕ್ಕೆ ಇದನ್ನು ಇಷ್ಟು ದೊಡ್ಡ ವಿಷಯಮಾಡುತ್ತಿದ್ದೀರಿ ಎಂದು ಕಿಡಿಕಾರಿದರು. ಸಿಐಎಸ್‌ಎಫ್ ಅಧಿಕಾರಿಗಳು ಈ ಮೂವರನ್ನು ಸಹಾರ ಪೊಲೀಸ್ ಸ್ಟೇಶನ್‌ಗೆ ಕಳುಹಿಸಿಕೊಟ್ಟರು.
ಗುರುವಾರ ಮಧ್ಯರಾತ್ರಿ ಕಾಂಚನಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸ್ನೇಹಿತೆಯರೊಂದಿಗೆ ತಮಾಷೆಯಾಗಿ ಹೇಳಿದ ಮಾತು ಇಷ್ಟೊಂದು ಗಂಭೀರ ಸ್ವರೂಪ ಪಡೆಯುತ್ತದೆ ಯಾರೂ ಊಹಿಸಿರಲಿಲ್ಲ. ಯಾರನ್ನು ಘಾಸಿಗೊಳಿಸುವ ಉದ್ದೇಶ ತಮಗಿರಲಿಲ್ಲ ಎಂದು ಬಂಧಿತರು ಹೇಳಿದ್ದಾಗಿ ಇನ್ಸ್‌ಪೆಕ್ಟರ್ ಮುಖೇಡ್ಕರ್ ಹೇಳಿದ್ದಾರೆ..