ಅಭಿಷೇಕ್-ಐಶ್ವ ರ್ಯಾಗೆ ಗುಲಾಬ್‌ಜಾಮೂನ್

ಬಾಲಿವುಡ್‌ನ ಜನಪ್ರಿಯ ತಾರಾದಂಪತಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಮತ್ತೆ ಬೆಳ್ಳಿತೆರೆಯಲ್ಲಿ ಜೊತೆಯಾಗುತ್ತಿದ್ದಾರೆ. ಹೌದು.. ‘ಗುಲಾಬ್ ಜಾಮೂನ್’ ಎಂಬ ಹೆಸರಿನ ಪ್ರಣಯ ಪ್ರಧಾನ ಕಥಾವಸ್ತುವಿರುವ ಚಿತ್ರದಲ್ಲಿ ಇವರಿಬ್ಬರು ನಾಯಕ-ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದ ಕಥೆ ಕೇಳಿಯೇ ಅಭಿಷೇಕ್ ಹಾಗೂ ಐಶ್ವರ್ಯಾ ಚಿತ್ರದಲ್ಲಿ ನಟಿಸಲು ಗ್ರೀನ್‌ಸಿಗ್ನಲ್ ನೀಡಿದ್ದಾರಂತೆ. ‘ದೇವ್ ಡಿ’, ‘ಗ್ಯಾಂಗ್ಸ್ ಆಫ್ ವಸಾಯ್‌ಪುರ್’ನಂತಹ ಜನಪ್ರಿಯ ಚಿತ್ರಗಳ ನಿರ್ದೇಶಕರಾದ ಅನುರಾಗ್ ಕಶ್ಯಪ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಆದರೆ ನಿರ್ದೇಶನದ ಹೊಣೆಯನ್ನು ಅವರು ಉದಯೋನ್ಮುಖ ನಿರ್ದೇಶಕರೊಬ್ಬರಿಗೆ ವಹಿಸಲಿದ್ದಾರಂತೆ.
ಒಂದು ಲೆಕ್ಕದಲ್ಲಿ ಗುಲಾಬ್ ಜಾಮೂನ್, ‘ಬಚ್ಚನ್’ ಫ್ಯಾಮಿಲಿ ಚಿತ್ರ ಎಂದರೂ ಸರಿಯೇ. ಯಾಕೆಂದರೆ, ಅಭಿಷೇಕ್ ತಂದೆ, ಐಶ್ವರ್ಯಾ ಮಾವ ಅಮಿತಾಭ್ ಬಚ್ಚನ್ ಇದರಲ್ಲಿ ಅತಿಥಿ ಪಾತ್ರವೊಂದರಲ್ಲಿ ನಟಿಸುವ ಮೂಲಕ ಗುಲಾಬ್ ಜಾಮೂನ್‌ಗೆ ಇನ್ನಷ್ಟು ಸಿಹಿ ತುಂಬಲಿದ್ದಾರೆ.
ಮಣಿರತ್ನಂ ನಿರ್ದೇಶನದ ಸೂಪರ್‌ಹಿಟ್ ಚಿತ್ರ ಗುರುವಿನಲ್ಲಿ ಅಭಿಷೇಕ್ ಹಾಗೂ ಐಶ್ವರ್ಯಾ ಮೊದಲ ಬಾರಿಗೆ ಜೊತೆಯಾಗಿ ನಟಿಸಿದ್ದರು. ಆನಂತರ ಇಬ್ಬರೂ ಪರಸ್ಪರ ಪ್ರೇಮಿಸಿ ವಿವಾಹ ಕೂಡಾ ಆಗಿದ್ದರು. ಮಗಳು ಆರಾಧ್ಯ ಜನಿಸಿದ ಬಳಿಕ ಐಶ್ವರ್ಯಾ ಚಿತ್ರರಂಗದಿಂದ ಸ್ವಲ್ಪ ವಿರಾಮ ತೆಗೆದುಕೊಂಡಿದ್ದರು.
2015ರಲ್ಲಿ ಸಂಜಯ್ ಗುಪ್ತಾ ನಿರ್ದೇಶನದ ಗುಝಾರಿಷ್ ಚಿತ್ರದ ಮೂಲಕ ಅವರು ಮತ್ತೆ ಬಾಲಿವುಡ್‌ಗೆ ರೀ ಎಂಟ್ರಿ ಕೊಟ್ಟಿದ್ದರು. ಕಳೆದ ವರ್ಷದ ಅಂತ್ಯದ ವೇಳೆ ತೆರೆಕಂಡ, ಐಶ್ವರ್ಯಾ ಅಭಿನಯದ ಯೇ ದಿಲ್ ಹೈ ಮುಷ್ಕಿಲ್, ಬಾಕ್ಸ್‌ಆಫೀಸ್‌ನಲ್ಲಿ ಯಶಸ್ಸು ಕಂಡಿತ್ತು. ಸದ್ಯ ಅಭಿಷೇಕ್ ಬಚ್ಚನ್ ಪ್ರಭುದೇವ ನಿರ್ದೇಶನದ ‘ಲೈಫ್ಟಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಮಣಿರತ್ನಂ ಅವರ ರಾವಣ್ ಚಿತ್ರದ ಬಳಿಕ ಈ ತಾರಾ ಜೋಡಿ ಒಟ್ಟಾಗಿ ಅಭಿನಯಿಸುತ್ತಿರುವ ಗುಲಾಬ್ ಜಾಮೂನ್ ಚಿತ್ರವನ್ನು ಆಸ್ವಾದಿಸಲು ಬಾಲಿವುಡ್ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.







