'ಗುರ್ಮೆಹರ್ ಕೌರ್' ಕುಡಿದು ತೂರಾಡುವ ವೀಡಿಯೋದ ಅಸಲಿಯತ್ತೇನು ?

ಹೊಸದಿಲ್ಲಿ, ಮಾ.4: ದಿಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಗುರ್ಮೆಹರ್ ಕೌರ್ ಅವರ ಫೇಸ್ ಬುಕ್ ಪೋಸ್ಟ್ ಒಂದು ದೇಶಭಕ್ತಿಯ ವಿಚಾರದಲ್ಲಿ ತೀವ್ರ ಚರ್ಚೆಗೆ ಆಸ್ಪದ ನೀಡಿರುವಂತೆಯೇ ಶುಕ್ರವಾರದಂದು ಯುವತಿಯೊಬ್ಬಳು ಕಾರೊಂದರಲ್ಲಿ ಹಾಡುತ್ತಾ ಕುಣಿಯುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸಿದೆ.
ಹಲವಾರು ಟ್ವಿಟ್ಟರಿಗರು ಈ ವೀಡಿಯೋದಲ್ಲಿ ಕಾಣಿಸುವ ಯುವತಿ ಕೌರ್ ಎಂದೇ ತಿಳಿದು ಆಕೆಯನ್ನು ಟ್ರೋಲ್ ಮಾಡಿದ್ದಾರೆ.
ವಾಸ್ತವವಾಗಿ ಈ ವೀಡಿಯೋದಲ್ಲಿ ಕಾಣಿಸುವ ಯುವತಿ ಕೌರ್ ಅಲ್ಲದೇ ಇದ್ದರೂ ಸುದ್ದಿ ತಾಣವೊಂದು ಈ ಯುವತಿ ಕೌರ್ ಆಗಿದ್ದಿರಬಹುದು ಎಂಬ ಸುದ್ದಿಯನ್ನೂ ಪ್ರಕಟಿಸಿದೆ. ಈ ವೀಡಿಯೋ ಎಡಪಂಥೀಯರು ಮತ್ತು ಎಬಿವಿಪಿ ನಡುವೆ ಮತ್ತೆ ಕೆಸರೆರಚಾಟಕ್ಕೆ ಆಸ್ಪದ ನೀಡಿದೆ.
ಕೌರ್ ಅವರ ಮಾನಹಾನಿಗೈಯ್ಯಲೆಂದೇ ಎಬಿವಿಪಿ ಈ ವೀಡಿಯೋವನ್ನು ಸಾಮಾಜಿಕ ತಾಣಗಳಲ್ಲಿ ಹರಿಯಬಿಟ್ಟಿದೆ ಎಂದು ಸಿಪಿಐ(ಎಂ) ಪಾಲಿಟ್ ಬ್ಯೂರೋ ಸದಸ್ಯ ಕವಿತಾ ಕೃಷ್ಣನ್ ಹೇಳಿದ್ದಾರೆ. ಯಾರೋ ಮಹಿಳೆ ಕಾರಿನಲ್ಲಿ ಹಾಡುತ್ತಾ ಕುಣಿಯುತ್ತಿದ್ದಾಳೆ. ಇದರಲ್ಲಿ ತಪ್ಪೇನಿದೆ? ಈಗ ಎಬಿವಿಪಿ ಕೌರ್ ಅವರ ಮಾನ ಹಾನಿ ಮಾಡಲು ಯತ್ನಿಸುತ್ತಿದೆ. ಹುಡುಗಿಯರು ಜೆಎನ್‌ಯುವಿನಲ್ಲಿ ಮದ್ಯ ಸೇವಿಸುತ್ತಾರೆ ಎಂದು ಹೇಳುವ ಮಂದಿಯೇ ಇಂತಹ ಕೆಲಸ ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.
ಆದರೆ ಎಬಿವಿಪಿ ಮಾತ್ರ ತಾನು ಇಂತಹ ಕಾರ್ಯಗಳನ್ನು ಮಾಡುವುದಿಲ್ಲ ಎಂದು ಹೇಳಿಕೊಂಡಿದೆ. ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಕಮ್ಯುನಿಸ್ಟರು ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಎಬಿವಿಪಿಯ ಮಾಧ್ಯಮ ಸಂಚಾಲಕ ಸಾಕೇತ್ ಬಹುಗುಣ ಆರೋಪಿಸಿದ್ದಾರೆ.







