ಕೋಮು ಸೌಹಾರ್ದತೆ ಮೆರೆದ ಸಾಮೂಹಿಕ ವಿವಾಹ

ಸಾಮೂಹಿಕ ವಿವಾಹದ ಮೆರವಣಿಗೆಯಲ್ಲಿ ಸ್ಥಳಿಯರು ಭಾರೀ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಲಕ್ನೋ,ಮಾ.4: ವೈದಿಕ ಮಂತ್ರಗಳು ಮತ್ತು ಕುರ್ಆನ್ ಪಠಣಗಳ ನಡುವೆಯೇ ಸುರೇಶ ನೌಷಾದ್ನನ್ನು ಸ್ವಾಗತಿಸಿದರೆ,ರಹಮಾನ್ ಆತ್ಮೀಯತೆಯಿಂದ ಸುನಿಲ್ನನ್ನು ಅಪ್ಪಿಕೊಂಡಿದ್ದ. ಒಂದೇ ಸೂರಿನ ಕೆಳಗೆ ತಮ್ಮ ಸಮುದಾಯಗಳ ಕನ್ಯೆಯರೊಂದಿಗೆ ವಿವಾಹವಾದ ಅವರು ಪರಸ್ಪರರನ್ನು ಅಭಿನಂದಿಸಿದರು. ಇದೆಲ್ಲ ನಡೆದಿದ್ದು ಕಾನ್ಪುರ ನಗರದ ಹೊರವಲಯದಲ್ಲಿರುವ ರಾವತ್ಪುರ ಗ್ರಾಮದಲ್ಲಿ. ಸುಮಾರು 8,000 ದಷ್ಟಿರುವ ಸ್ಥಳೀಯರು ಆಯೋಜಿಸಿದ್ದ, ಜಾತ್ಯತೀತತೆಯನ್ನು ಮೆರೆದ ಸಾಮೂಹಿಕ ವಿವಾಹದಲ್ಲಿ ಹತ್ತು ಹಿಂದು ಮತ್ತು ಮುಸ್ಲಿಮ್ ಜೋಡಿಗಳು ದಾಂಪತ್ಯ ಜೀವನವನ್ನು ಪ್ರವೇಶಿಸಿದವು.
ಗುರುವಾರ ರಾತ್ರಿ ನಡೆದ ಸಮಾರಂಭದಲ್ಲಿ ಮಹಂತ ಅಲೋಕ ದುಬೆ ಅವರು ಹಿಂದು ಪದ್ಧತಿಯಂತೆ ವಿವಾಹ ವಿಧಿಗಳನ್ನು ನಡೆಸಿದರೆ, ಸ್ಥಳೀಯ ಮಸೀದಿಗಳ ಪೇಶ್ ಇಮಾಮ್ಗಳಾದ ಝಿಯಾವುರ್ ರಹಮಾನ್ ಮತ್ತು ಅಸ್ಘರ್ ಅಲಿ ನಿಕಾಹ್ ವಿಧಿಗಳನ್ನು ನೆರವೇರಿಸಿದರು. ಇದರೊಂದಿಗೆ ರಾವತ್ಪುರ ಜಾತ್ಯತೀತತೆ ಮತ್ತು ಭ್ರಾತೃತ್ವದ ಪರಿಪೂರ್ಣ ನಿದರ್ಶನವಾಗಿ ಹೊರಹೊಮ್ಮಿದೆ.
ಆದರೆ ಕೆಲವೇ ತಿಂಗಳುಗಳ ಹಿಂದೆ ಇದೇ ರಾವತ್ಪುರ ಎಂಬ ಪುಟ್ಟ ಗ್ರಾಮ ತಪ್ಪು ಕಾರಣಗಳಿಂದಾಗಿ ಸುದ್ದಿಯಾಗಿತ್ತು. ಇಲ್ಲಿ ಹೊತ್ತುರಿದಿದ್ದ ಕೋಮು ದಳ್ಳುರಿ ಸಮೀಪದ ಪ್ರದೇಶಗಳಿಗೂ ಹರಡುವ ಅಪಾಯವಿತ್ತು. ಆದರೆ ಹಿರಿಯರ ಮಧ್ಯಸ್ಥಿಕೆ ಯಿಂದ ಅಲ್ಲಿಗೇ ಶಮನಗೊಂಡಿತ್ತು.
ಈ ಬೆಳವಣಿಗೆಗಳಿಂದ ತಲ್ಲಣಗೊಂಡಿದ್ದ ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಶಕೀಲ್ ಅವರು ಉದಾತ್ತ ಉಪಕ್ರಮವೊಂದಕ್ಕೆ ಮುಂದಾಗಿ ಹಿಂದು ಮತ್ತು ಮುಸ್ಲಿಮ್ ಜೋಡಿಗಳ ಸಾಮೂಹಿಕ ವಿವಾಹದ ಪರಿಕಲ್ಪನೆಯನ್ನು ಗ್ರಾಮಸ್ಥರ ಮುಂದಿರಿಸಿದಾಗ ಅದಕ್ಕೆ ದೊರೆತ ಧನಾತ್ಮಕ ಪ್ರತಿಕ್ರಿಯೆ ಅವರನ್ನು ನಿಬ್ಬೆರಗಾಗಿಸಿತ್ತು.
ಸ್ಥಳೀಯರೇ ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದು, ಇಡೀ ಗ್ರಾಮವೇ ವಿವಾಹ ಸಮಾರಂಭ ದಲ್ಲಿ ಭಾಗಿಯಾಗಿದ್ದರಿಂದ ಅಂಗಡಿ-ಮುಂಗಟ್ಟುಗಳು ಬೆಳಿಗ್ಗೆಯಿಂದಲೇ ಮುಚ್ಚಿದ್ದವು.
ವಿವಾಹ ಮಂಟಪ ಜನರಿಗೆ ಅದುವರೆಗೆ ಕಾಣದಿದ್ದ ಅಪೂರ್ವ ಅನುಭವವನ್ನು ನೀಡಿತ್ತು. ಸಮಾರಂಭಕ್ಕೆ ಮುನ್ನ ಉಭಯ ಸಮುದಾಯಗಳ ವರರು ಪರಸ್ಪರರನ್ನು ಸ್ವಾಗತಿಸಿ, ನವಜೀವನಕ್ಕೆ ಶುಭಾಶಯಗಳನ್ನು ಕೋರಿದರು. ನೆರೆದಿದ್ದ ಅತಿಥಿಗಳು ಜೋಡಿಗಳ ಮೇಲೆ ಹೂಮಳೆಗೈದರು. ಕೋಮು ಸೌಹಾರ್ದತೆಯನ್ನು ಗಟ್ಟಿಯಾಗಿಸಲು ಇಂತಹ ಕಾರ್ಯಕ್ರಮಗಳು ನಡೆಯಬೇಕು ಎನ್ನುವುದು ಅಲ್ಲಿ ಸೇರಿದ್ದ ಎಲ್ಲರ ಪ್ರಾಮಾಣಿಕ ಭಾವನೆ ಆಗಿತ್ತು.
‘‘ಪ್ರತಿ ವರ್ಷ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ನಾನು ಗ್ರಾಮಸ್ಥರನ್ನು ಕೋರಿಕೊಂಡಿದ್ದೇನೆ. ಕೋಮು ಸೌಹಾರ್ದತೆ ಮತ್ತು ಮಾನವೀಯತೆಗೆ ಈ ಕಾರ್ಯಕ್ರಮ ಅತಿ ದೊಡ್ಡ ಉದಾಹರಣೆಯಾಗಿದೆ ’’ ಎಂದು ಆರತಿಯನ್ನು ತನ್ನ ಬಾಳಸಂಗಾತಿಯನ್ನಾಗಿಸಿಕೊಂಡ ಸುನಿಲ ಬಾಥಮ್ ಹೇಳಿದರು.
ಶಹನಾಝ್ ಬಾನೋ ಜೊತೆ ದಾಂಪತ್ಯ ಜೀವನವನ್ನು ಪ್ರವೇಶಿಸಿದ ಛೋಟೆ ಬಾಬು, ಸಾಮೂಹಿಕ ವಿವಾಹ ಕಾರ್ಯಕ್ರಮದ ಸುದ್ದಿ ಗೊತ್ತಾದಾಗ ತನ್ನ ಮದುವೆ ಅದೇ ವೇದಿಕೆಯಲ್ಲಿ ನಡೆಯಬೇಕು ಎಂದು ನಿರ್ಧರಿಸಿದ್ದರು. ‘‘ನಾವೆಲ್ಲ ಒಂದೇ ಎಂದು ಪ್ರತಿಯೊಬ್ಬರಿಗೂ ಸಾರಲು ಇಂತಹ ಸೌಹಾರ್ದ ಕಾರ್ಯಕ್ರಮಗಳು ಈಗಿನ ಅಗತ್ಯ ಗಳಾಗಿವೆ ’’ ಎಂದರು.
ಕಳೆದ ವರ್ಷವೂ ಶಕೀಲ್ ಕರೆಯ ಮೇರೆಗೆ ಗ್ರಾಮದ ಮುಸ್ಲಿಮರು ರಾಮನವಮಿ ಮೆರವಣಿಗೆಗೆ ಬೆಂಗಾವಲು ನೀಡಿದ್ದರೆ, ಪ್ರವಾದಿ ಮುಹಮ್ಮದ್ (ಸ.ಅ.)ರ ಜನ್ಮ ದಿನಾಚರಣೆಯ ದಿನ ಮೆರವಣಿಗೆಯ ನೇತೃತ್ವವನ್ನು ಹಿಂದುಗಳು ವಹಿಸಿದ್ದರು.