ಅಭಿವ್ಯಕ್ತಿ ಸ್ವಾತಂತ್ರ ದೇಶದ ಆಂತರಿಕ ಭದ್ರತೆಗೆ ಮಾರಕವಾಗದಿರಲಿ: ನ್ಯಾ. ಭವಾನಿ
'ಮೂಲಭೂತ ಕರ್ತವ್ಯ, ಪೊಲೀಸ್ ದೂರು ಪ್ರಾಧಿಕಾರ' ಕಾರ್ಯಾಗಾರ

ಮಂಗಳೂರು, ಮಾ.4: ದೇಶದ ಸಂವಿಧಾನದಲ್ಲಿ ಒದಗಿಸಲಾಗಿರುವ ಮೂಲಭೂತ ಹಕ್ಕುಗಲು ಮತ್ತು ಕರ್ತವ್ಯಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರವೂ ಬಹು ಮುಖ್ಯವಾದದು. ಆದರೆ ಅಭಿವ್ಯಕ್ತಿ ಸ್ವಾತಂತ್ರವು ದೇಶದ ರಹಸ್ಯ ಮಾಹಿತಿಯ ಸೋರಿಕೆ ಮತ್ತು ಆಂತರಿಕ ಭದ್ರತೆಯ ವಿಷಯದಲ್ಲಿ ಪ್ರದರ್ಶಿಸುವಂತಾಗಬಾರದು ಎಂದು 4ನೆ ಅಪರ ಜಿಲ್ಲಾ ಮತುತಿ ಸೆಷನ್ಸ್ ನ್ಯಾಯಾಧೀಶೆ ಎನ್.ವಿ. ಭವಾನಿ ತಿಳಿಸಿದ್ದಾರೆ.
ಅವರು ಶನಿವಾರ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿಶ್ವವಿದ್ಯಾನಿಲಯ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೂಲಭೂತ ಕರ್ತವ್ಯಗಳು ಮತ್ತು ಪೊಲೀಸ್ ದೂರು ಪ್ರಾಧಿಕಾರದ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ರಾಜಕಾರಣಿಗಳಿಂದ ಹಿಡಿದು ಎಲ್ಲರೂ ತಮ್ಮ ತಮ್ಮ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಿದಾಗ ಯಾವುದೇ ಸಮಸ್ಯೆ ಸೃಷ್ಟಿಯಾಗುವುದಿಲ್ಲ. ದೇಶದ ಸಂವಿಧಾನವನ್ನು ಎಲ್ಲರೂ ಗೌರವಿಸಬೇಕು. ದೇಶದ ಸಮಕಾಲೀನ ವಿಷಯಗಳ ಬಗ್ಗೆ ಚರ್ಚಿಸಬೇಕು. ನಾಡು ನುಡಿಯ ಜತೆಗೆ ಪರಿಸರ ರಕ್ಷಣೆಯ ಬಗ್ಗೆಯೂ ಕಾಳಜಿಯನ್ನು ನಾವು ಬೆಳೆಸಿಕೊಳ್ಳಹೇಕು ಎಂದು ಅವರು ಸಲಹೆ ನೀಡಿದರು.
ಜಾತಿ, ಜನಾಂಗ, ಭೇದ-ಭಾವವನ್ನು ಬಿಟ್ಟು ಎಲ್ಲರೂ ಒಗ್ಗೂಡಬೇಕು. ರಾಜ್ಯ, ಕೇಂದ್ರ ಸರಕಾರಗಳಿಂದ ಹಲವಾರು ಸ್ವಚ್ಛತೆ, ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆಗಳಿದ್ದು, ಅವುಗಳಲ್ಲಿ ಯುವಕರು ಭಾಗವಹಿಸಬೇಕು. ನೀರು, ಇಂಧನಗಳಂತಹ ಅತ್ಯಮೂಲ್ಯ ವಸುಗಳನ್ನು ಮಿತವಾಗಿ ಬಳಸಬೇಕು. ಮುಂದಿನ ಪೀಳಿಗೆಗೆ ಅವುಗಳನ್ನು ಕೊಡುಗೆಯಾಗಿ ನೀಡಬೇಕು ಎಂದರು.
ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಸ್.ಪಿ. ಚಂಗಪ್ಪ ಮಾತನಾಡಿ, ಕಾನೂನು ಮತುತಿ ನ್ಯಾಯದಿಂದ ಯಾವುದೇ ವ್ಯಕ್ತಿ ದೂರ ಸರಿಯಬಾರದು. ಅರ್ಥಶಾಸ್ತ್ರದಿಂದ ಹಿಡಿದು ಎಲ್ಲ ಕ್ಷೇತ್ರಗಳಲ್ಲಿ ಸುಮಾರು 2,500ಕ್ಕೂ ಹೆಚ್ಚು ಕಾನೂನುಗಳಿವೆ. ಅವುಗಳ ರಕ್ಷಣೆಯಾಗಬೇಕು ಎಂದರು.
ಸಹಾಯಕ ಪೊಲೀಸ್ ಆಯುಕ್ತು ವಾಲಂಟೈನ್ ಡಿಸೋಜ ಮಾತನಾಡಿ, ನಗರದ ಪೊಲೀಸ್ ದೂರು ಪ್ರಾಧಿಕಾರವು 30 ದೂರುಗಳನ್ನು ಸ್ವೀಕರಿಸಿದೆ. ಅದರಲ್ಲಿ 6 ದೂರುಗಳನ್ನು ಇತ್ಯರ್ಥ ಪಡಿಸಲಾಗಿದ್ದು, ಇನ್ನೂ 24 ದೂರುಗಳು ಬಾಕಿ ಉಳಿದಿವೆ. ಪೊಲೀಸ್ ದೂರು ಪ್ರಾಧಿಕಾರದ ಸಭೆ ನಡೆಯುವ ದಿನದಂದು ಕೂಡ ದೂರುಗಳನ್ನು ಸ್ವೀಕರಿಸಿ, ಪರಿಶೀಲಿಸಲಾಗುವುದು ಎಂದರು.
ಕಾರ್ಯಾಗಾರದಲ್ಲಿ ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಡಾ. ರೊನಾಲ್ಡ್ ಅನಿಲ್ ಫೆರ್ನಾಂಡಿಸ್, ನಿವೃತ್ತ ಪ್ರಾಧ್ಯಾಪಕ ಡಾ. ಪಿ. ಅನಂತಕೃಷ್ಣ ಭಟ್ ಮಾತನಾಡಿದರು.
ಈ ಸಂದರ್ಭ ಹಿರಿಯ ಸಿವಿಲ್ ನ್ಯಾಯಾಧೀಶ ಮಲ್ಲನಗೌಡ, ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಲತಾ ಪಂಡಿತ್ ಉಪಸ್ಥಿತರಿದ್ದರು.
ಸುಶ್ಮಾ, ದಿವ್ಯಾ ಪ್ರಾರ್ಥಿಸಿದರು. ಡಾ. ದಯಾನಂದ ನಾಯ್ಕಾ ಕಾರ್ಯಕ್ರಮ ನಿರೂಪಿಸಿದರು.







