ಎರಡನೇ ಬಾರಿ ಕೇರಳದ ಯೋಧ ಮ್ಯಾಥ್ಯೂ ಶವದ ಮರಣೋತ್ತರ ಪರೀಕ್ಷೆ

ತಿರುವನಂತಪುರ,ಮಾ.4: ಮಹಾರಾಷ್ಟ್ರದ ನಾಸಿಕ್ ಬಳಿಯ ದೇವಲಾಲಿ ದಂಡುಪ್ರದೇಶದಲ್ಲಿನ ಬ್ಯಾರಕ್‌ವೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಯೋಧ ರಾಯ್ ಮಾಥ್ಯೂ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಶನಿವಾರ ಇಲ್ಲಿಯ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಎರಡನೇ ಬಾರಿಗೆ ನಡೆಸಲಾಗಿದೆ. ಮ್ಯಾಥ್ಯೂ ಸಾವಿನ ಬಗ್ಗೆ ಶಂಕೆಗಳನ್ನು ವ್ಯಕ್ತಪಡಿಸಿದ್ದ ಅವರ ಕುಟುಂಬವು ಶವವನ್ನು ಸ್ವೀಕರಿಸಲು ನಿರಾಕರಿಸಿತ್ತಲ್ಲದೆ, ಮತ್ತೊಮ್ಮೆ ಶವದ ಮರಣೋತ್ತರ ಪರೀಕ್ಷೆ ನಡೆಯಬೇಕೆಂದು ಆಗ್ರಹಿಸಿತ್ತು. ಮ್ಯಾಥ್ಯೂ ಶವವನ್ನು ಶನಿವಾರ ಬೆಳಿಗ್ಗೆ ವಿಮಾನದ ಮೂಲಕ ಇಲ್ಲಿಗೆ ತರಲಾಗಿತ್ತು. ಮ್ಯಾಥ್ಯೂ(33) ಕೊಲ್ಲಂ ಜಿಲ್ಲೆಯ ಇಝುಕನ್‌ನ ಕರುವೇಲಿ ಗ್ರಾಮದವರಾಗಿದ್ದರು.
ನಮ್ಮ ಹಲವಾರು ಪ್ರಶೆಗಳಿಗೆ ಉತ್ತರ ಸಿಕ್ಕಿಲ್ಲ. ಮೃತದೇಹ ಗುರುತು ಹಿಡಿಯಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದೆ. ಮೃತದೇಹದ ಜೊತೆಯಲ್ಲಿದ್ದ ಅಧಿಕಾರಿಗಳು ಮ್ಯಾಥ್ಯೂ ಪತ್ನಿ ಸೇರಿದಂತೆ ನಿಕಟ ಬಂಧುಗಳಿಗೂ ಅದನ್ನು ತೋರಿಸಲು ನಿರಾಕರಿಸಿದ್ದಾರೆ ಎಂದು ಮೃತದೇಹ ತಿರುವನಂತಪುರಕ್ಕೆ ಆಗಮಿಸಿದಾಗ ಸ್ಥಳದಲ್ಲಿ ಉಪಸ್ಥಿತರಿದ್ದ ಬಂಧು ವೋರ್ವರು ಹೇಳಿದರು.
ನಾಸಿಕ್‌ನಲ್ಲಿ 214 ರಾಕೆಟ್ ರೆಜಿಮೆಂಟ್‌ನಲ್ಲಿ ಗನ್ನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಯ್ ಮಾಥ್ಯೂ(33) ಅಲ್ಲಿಯ ಸ್ಥಳೀಯ ಮರಾಠಿ ಟಿವಿ ಚಾನೆಲ್ಲೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಸೇನೆಯಲ್ಲಿನ ಬ್ರಿಟಿಷರ ಕಾಲದ ಅಮಾನವೀಯ ಆರ್ಡರ್ಲಿ ವ್ಯವಸ್ಥೆಯನ್ನು ಬಯಲಿಗೆಳೆದಿದ್ದಲ್ಲದೆ, ಹಿರಿಯ ಅಧಿಕಾರಿಗಳಿಂದ ಕಿರುಕುಳಗಳ ಬಗ್ಗೆ ದೂರಿಕೊಂಡಿದ್ದರು. ಸೋಮವಾರ ಈ ಕಾರ್ಯಕ್ರಮ ಪ್ರಸಾರಗೊಂಡಿತ್ತು. ಅದಕ್ಕೂ ಮುನ್ನಾದಿನ ಕೇರಳದ ಕೊಲ್ಲಂನಲ್ಲಿರುವ ಪತ್ನಿ ಫಿನಿ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದ ಮ್ಯಾಥ್ಯೂ ಬಳಿಕ ಕರ್ತವ್ಯಕ್ಕೂ ಹಾಜರಾಗದೆ ನಾಪತ್ತೆಯಾಗಿದ್ದರು. ಗುರುವಾರ ಸೇನಾ ಶಿಬಿರದ, ಬಳಕೆಯಲ್ಲಿಲ್ಲದ ಬ್ಯಾರಕ್‌ವೊಂದರಲ್ಲಿ ತೀವ್ರ ಕೊಳೆತಿದ್ದ, ನೇಣು ಬಿಗಿದ ಸ್ಥಿತಿಯಲ್ಲಿದ್ದ ಅವರ ಮೃತದೇಹ ಪತ್ತೆಯಾಗಿತ್ತು.
ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಸೇನೆಯು ಹೇಳಿದೆಯಾದರೂ, ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಮ್ಯಾಥ್ಯೂ ಕುಟುಂಬವು ಅವರ ಸಾವಿಗೆ ಕಾರಣವಾದ ಸಂದರ್ಭಗಳ ಕುರಿತು ತನಿಖೆಗೆ ಒತ್ತಾಯಿಸಿದೆ. ಮ್ಯಾಥ್ಯೂ ಕಾಲಿನ ಮೇಲೆ ಥಳಿಸಿದ ಗುರುತುಗಳಿವೆ ಮತ್ತು ದೇಹದ ಕೆಲವು ಭಾಗಗಳಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದೂ ಅದು ಆರೋಪಿಸಿದೆ.
ಶವವನ್ನು ತಂದಾಗ ವಿಮಾನ ನಿಲ್ದಾಣದಲ್ಲಿ ಬಿಕ್ಕುತ್ತ ನಿಂತಿದ್ದ ಫಿನಿ,ನನಗೆ ನ್ಯಾಯ ಬೇಕು. ನಿಜವಾಗಿ ನಡೆದಿದ್ದೇನು ಎನ್ನುವುದು ನನಗೆ ಗೊತ್ತಾಗಬೇಕು. ನಾನು ಅವರನ್ನು ನೋಡಲು ಬಯಸುತ್ತೇನೆ ಎಂದು ತನ್ನನ್ನು ಸಂಪರ್ಕಿಸಿದ ಸುದ್ದಿಗಾರರಲ್ಲಿ ಹೇಳಿದರು.
ಮ್ಯಾಥ್ಯೂ ಶವವನ್ನು ತಂದಾಗ ಅಗೌರವ ತೋರಿಸಲಾಗಿದೆ. ಅರ್ಧಗಂಟೆಯ ಕಾಲ ಅದು ಟ್ರಾಲಿಯಲ್ಲಿ ಅನಾಥವಾಗಿತ್ತು ಎಂದು ಬಂಧುಗಳು ಆರೋಪಿಸಿದರು.
ತನ್ನ ಪತಿಯ ಸಾವಿನ ಬಗ್ಗೆ ಶಂಕೆಗಳನ್ನು ವ್ಯಕ್ತಪಡಿಸಿ ಫಿನಿ ಕೊಲ್ಲಂ ಜಿಲ್ಲಾಧಿಕಾರಿಗಳು ಮತ್ತು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ ಎಂದು ಕೊಲ್ಲಂ ಎಸ್‌ಪಿ(ಗ್ರಾಮೀಣ) ಎಸ್.ಸುರೇಂದ್ರನ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ತನ್ನ ಗುರುತನ್ನು ರಹಸ್ಯವಾಗಿಡುವುದಾಗಿ ಚಾನೆಲ್ ಭರವಸೆ ನೀಡಿತ್ತಾದರೂ ತನ್ನ ಹಿರಿಯ ಅಧಿಕಾರಿಗಳಿಗೆ ವಿಷಯ ಗೊತ್ತಾಗಿದೆ ಎಂದು ಮ್ಯಾಥ್ಯೂ ಪತ್ನಿಗೆ ತಿಳಿಸಿದ್ದರು. ರವಿವಾರದ ಕರೆಯ ಬಳಿಕ ಅವರು ಮತ್ತೆ ಪತ್ನಿಯ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.
ಸೇನಾ ಶಿಬಿರದಲ್ಲಿನ ಗುಲಾಮಗಿರಿಯ ಬಗ್ಗೆ ಮ್ಯಾಥ್ಯೂ ಆಗಾಗ್ಗೆ ಪತ್ನಿಯ ಬಳಿ ದೂರಿಕೊಂಡಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಕೆಳಮಟ್ಟದ ನೌಕರರನ್ನು ಅಧಿಕಾರಿಗಳ ಮನೆಗಳಲ್ಲಿ ಬಲವಂತದಿಂದ ದುಡಿಸಿಕೊಳ್ಳಲಾಗುತ್ತಿದೆ ಎಂದೂ ಮ್ಯಾಥ್ಯೂ ತಿಳಿಸಿದ್ದರು.
ಸಶಸ್ತ್ರ ಪಡೆಗಳಲ್ಲಿ ಕಳಪೆ ಕೆಲಸದ ವಾತಾವರಣ ಮತ್ತು ಯೋಧರಿಗೆ ಕಿರುಕುಳ ಕುರಿತು ಸರಣಿ ಆರೋಪಗಳ ನಡುವೆಯೇ ಈ ನಿಗೂಢ ಸಾವು ಸಂಭವಿಸಿದೆ.