ಮಂಗಳೂರು: ಪಕ್ಕಲಡ್ಕ ಸ್ನೇಹ ಪಬ್ಲಿಕ್ ಶಾಲೆಯಲ್ಲಿ 'ಕನ್ನಡ ಭಾಷಾ ವೇದಿಕೆ' ಉದ್ಘಾಟನೆ

ಮಂಗಳೂರು, ಮಾ.4: ಪರೀಕ್ಷೆ ಮತ್ತು ಶಾಲಾ ಪುಸ್ತಕಗಳಲ್ಲದೆ ಪಠ್ಯೇತರ ಚಟುವಟಿಕೆಗಳ ಭಾಗವಾಗಿ ವಿದ್ಯಾರ್ಥಿಗಳು ಹೆಚ್ಚು ಪುಸ್ತಕ, ಪತ್ರಿಕೆಗಳನ್ನು ಓದಬೇಕು. ಹಾಗಾದರೆ ಮಾತ್ರ ನಮ್ಮ ಜ್ಞಾನದ ಶಕ್ತಿಯನ್ನು ವೃದ್ಧಿಸಬಹುದು ಎಂದು ಸನ್ಮಾರ್ಗ ವಾರಪತ್ರಿಕೆಯ ಸಂಪಾದಕ ಏ.ಕೆ.ಕುಕ್ಕಿಲ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅವರು ನಗರದ ಪಕ್ಕಲಡ್ಕ ಬಜಾಲ್ ನಲ್ಲಿರುವ ಸ್ನೇಹ ಪಬ್ಲಿಕ್ ಶಾಲೆಯಲ್ಲಿ ಕನ್ನಡ ಭಾಷಾ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನವಿದ್ದವನು ಮುಖ್ಯವಾಹಿನಿಗೆ ಬರಲು ಸಾಧ್ಯ. ಆದ್ದರಿಂದ ಹೆಚ್ಚು ಅಧ್ಯಯನಶೀಲತೆ ಮೈಗೂಡಿಸಿಕೊಂಡು ತಮ್ಮ ಜ್ಞಾನವನ್ನು ವೃದ್ಧಿಸಿಕೊಂಡರೆ, ಸಮಾಜಕ್ಕೆ ತನ್ನದೇ ಆದ ಸೇವೆಯನ್ನು ನೀಡಲು ಸಾಧ್ಯ. ಕನ್ನಡ ಭಾಷೆಯನ್ನು ಬೆಳೆಸಿ ಪೋಷಿಸಬೇಕು. ಮಕ್ಕಳು ಕನ್ನಡ ಸಾಹಿತ್ಯದಲ್ಲಿ ಹೆಚ್ಚು ಹೆಚ್ಚು ಬೆಳೆದು ಬರಬೇಕು. ಪುಸ್ತಕಗಳನ್ನು ಹೆಚ್ಚಾಗಿ ಓದುವವರಾಗಬೇಕೆಂದು ಎಂದರು.
ಶಾಲಾ ಅಧ್ಯಕ್ಷರಾದ ಯೂಸುಫ್ ಪಕ್ಕಲಡ್ಕ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ನಾಗರತ್ನ, ಕನ್ನಡ ಭಾಷಾ ವೇದಿಕೆಯ ಸಂಚಾಲಕರಾದ ಅಶೀರುದ್ದೇನ್, ಜೂಲಿಯಟ್, ಪುಷ್ಪ ಉಪಸ್ಥಿತರಿದ್ದರು.
ವಿದ್ಯಾರ್ಥಿ ಆಕಿಫ್ ಸ್ವಾಗತಿಸಿದರು. ಸುಫಿಯಾನ್ ಮತ್ತು ತಂಡದವರು ಜಾನಪದ ಗೀತೆ ಹಾಡಿದರು. ಜೀವನ್ ಡಿ ವಂದನಾರ್ಪಣೆಗೈದರು. ವಿದ್ಯಾರ್ಥಿನಿ ರೈಹಾನ ಕಾರ್ಯಕ್ರಮ ನಿರೂಪಿಸಿದರು.





