ಮಣಿಪುರ ಬಿಜೆಪಿ ಪದಾಧಿಕಾರಿಗಳ ವಿರುದ್ಧ ಎಫ್‌ಐಆರ್‌ಗೆ ಚು.ಆಯೋಗದ ಆದೇಶ

ಹೊಸದಿಲ್ಲಿ,ಮಾ.4: ತನ್ನ ನಿಗಾ ಸಮಿತಿಯ ಪೂರ್ವಾನುಮತಿ ಪಡೆದುಕೊಳ್ಳದೆ ಜಾಹೀರಾತೊಂದನ್ನು ಪ್ರಕಟಿಸಿದ್ದಕ್ಕಾಗಿ ಮಣಿಪುರ ಬಿಜೆಪಿಯ ಕೆಲವು ಪದಾಧಿಕಾರಿಗಳು ಮತ್ತು ಎಂಟು ವೃತ್ತಪತ್ರಿಕೆಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಚುನಾವಣಾ ಆಯೋಗವು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಆದೇಶಿಸಿದೆ.
ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ಮುನ್ನ ಶುಕ್ರವಾರ ಈ ಜಾಹೀರಾತು ಪ್ರಕಟಗೊಂಡಿತ್ತು.
ಮತದಾನ ಆರಂಭಗೊಳ್ಳುವ 48 ಗಂಟೆಗಳ ಮೊದಲು ಚುನಾವಣಾ ಜಾಹೀರಾತು ಗಳ ಪ್ರಕಟಣೆಯ ಮೇಲೆ ಯಾವುದೇ ನಿರ್ಬಂಧವಿಲ್ಲವಾದರೂ, ಬಿಹಾರ ವಿಧಾನಸಭಾ ಚುನಾವಣೆಗಳ ಸಂದರ್ಭ ಆಯೋಗವು ಜಾರಿಗೊಳಿಸಿರುವ ನಿಯಮದಂತೆ ಇಂತಹ ಜಾಹೀರಾತುಗಳು ಅದರ ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಸಮಿತಿಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಈ ಅನುಮತಿ ಇಲ್ಲದೆ ಯಾವುದೇ ವೃತ್ತಪತ್ರಿಕೆಯು ಜಾಹೀರಾತನ್ನು ಪ್ರಕಟಿಸು ವಂತಿಲ್ಲ ಎಂದೂ ನಿಯಮವು ಹೇಳುತ್ತದೆ. ಬಿಹಾರ ವಿಧಾನಸಭಾ ಚುನಾವಣೆಗಳ ಸಂದರ್ಭ ಬಿಜೆಪಿ ಕೆಲವು ವಿವಾದಾತ್ಮಕ ಜಾಹೀರಾತುಗಳನ್ನು ಪ್ರಕಟಿಸಿದ ಬಳಿಕ ಈ ನಿಯಮವನ್ನು ಜಾರಿಗೆ ತರಲಾಗಿತ್ತು.