ಮಂಗಳೂರು: ನೆಹರೂ ಮೈದಾನದಲ್ಲಿ 'ಹಾಟ್ ಏರ್ ಬಲೂನಿಂಗ್'ಗೆ ಪ್ರಾಯೋಗಿಕ ಚಾಲನೆ

ಮಂಗಳೂರು, ಮಾ.4: ಡೆಕ್ಕನ್ ಏರ್‌ಸ್ಪೋರ್ಟ್ಸ್ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಆಯೋಜಿಸಲಾದ ಹಾಟ್ ಏರ್ ಬಲೂನಿಂಗ್ ಕಾರ್ಯಕ್ರಮಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿ ಶುಭ ಹಾರೈಸಿದರು.
ಈ ಸಂದರ್ಭ ಉಪಸ್ಥಿತರಿದ್ದ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜಾ ಮಾತನಾಡಿ, ಯುವ ತರುಣರು ಇಂದು ಹೊಸ ಹುರುಪಿನೊಂದಿಗೆ ವಿನೂತನ ಸಂಶೋಧನೆಗಳನ್ನು ನಡೆಸುವ ಕಾರ್ಯ ಮಾಡುತ್ತಿದ್ದಾರೆ. ಇದಕ್ಕೆ ಪ್ರೋತ್ಸಾಹ ನೀಡುವ ಅಗತ್ಯವಿದೆ. ಆದರೆ ಇದು ಗಾಳಿಯಲ್ಲಿ ಮಾಡುವ ಸಾಹಸವಾಗಿರುವುದರಿಂದ ಇದಕ್ಕೆ ಸಾಕಷ್ಟು ಎಚ್ಚರಿಕೆಯೂ ಅಗತ್ಯ ಎಂದವರು ಹೇಳಿದರು.
ಶಾಸಕ ಜೆ.ಆರ್. ಲೋಬೋ ಮಾತನಾಡಿ, ಮಂಗಳೂರಿನ ಜನ ಇಂತಹ ಸಾಹಸಗಳನ್ನು ಸ್ವಾಗತಿಸುತ್ತಾರೆ. ಇದರಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯಲಿದೆ ಎಂದರು.
ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ. ಮುಹಮ್ಮ್ ಹನೀಫ್, ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ಮಾಜಿ ಸಂಸದ ಬಿ. ಇಬ್ರಾಹೀಂ, ಅದಾನಿ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಸ್ಥಾಪಕ ಮತ್ತು ಸಿಇಒ ಶೇಕ್ ಅಬ್ದುಲ್ ಮಲಿಕ್ ಸ್ವಾಗತಿಸಿದರು. ಉಪಸ್ಥಿತರಿದ್ದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.







