20 ಕ್ವಿಂಟಲ್ ಆಲೂಗಡ್ಡೆ ಮಾರಿ 1 ರೂ. ಲಾಭ ! : ಪ್ರಧಾನಿಗೆ ರೈತನ ಟ್ವೀಟ್

ಇಂದೋರ್ , ಮಾ. 4 : ಧವಸ ಧಾನ್ಯಗಳನ್ನು ಬಿಟ್ಟು ತರಕಾರಿ ಬೆಳೆದರೆ ಲಾಭ ಹೆಚ್ಚು ಎಂದು ಹೆಚ್ಚಿನವರು ಹೇಳುತ್ತಾರೆ. ಆದರೆ ಈಗ ಕೃಷಿಕರ ಪಾಲಿಗೆ ಏನನ್ನೂ ಬೆಳೆದರೂ ನಷ್ಟವೇ ಆಗುವಂತಹ ಪರಿಸ್ಥಿತಿ ಬಂದೊದಗಿದೆ. ಇಲ್ಲಿನ ರೈತ ರಾಜಾ ಚೌಧರಿ ಲಾಭ ಸಿಗಬಹುದು ಎಂಬ ಆಸೆಯಿಂದ ಆಲೂಗಡ್ಡೆ ಬೆಳೆದು ತೀವ್ರ ನಷ್ಟಕ್ಕೆ ಒಳಗಾಗಿದ್ದಾರೆ.
ತಾನು ಬೆಳೆದ 20 ಕ್ವಿಂಟಲ್ ಆಲೂಗಡ್ಡೆಯನ್ನು ಇಲ್ಲಿನ ಚೊಯ್ತಾರಾಂ ಮಂಡಿಯಲ್ಲಿ ಜುಜುಬಿ 1075 ರೂಪಾಯಿಗೆ ಮಾರಬೇಕಾಯಿತು. ಆದರೆ ಮಂಡಿಗೆ ಆಲೂಗಡ್ಡೆಯನ್ನು ತಲುಪಿಸಲು ಅವರಿಗೆ 1074 ರೂ. ಖರ್ಚಾಗಿದೆ ! ಅಂದರೆ , ಅವರಿಗೆ 20 ಕ್ವಿಂಟಲ್ ಆಲೂಗಡ್ಡೆಯನ್ನು ಮಾರಿ ಸಿಕ್ಕಿದ ಲಾಭ ಒಂದು ರೂಪಾಯಿ !
ವಿಶೇಷವೆಂದರೆ, ರಾಜಾ ಚೌಧರಿ ಪ್ರಕಾರ ಅವರಿಗೆ ಈ ಬಾರಿ ಒಂದು ರೂಪಾಯಿಯಾದರೂ ಲಾಭ ಸಿಕ್ಕಿದೆ. ಆದರೆ ಕಳೆದ ಬಾರಿ 2393 ರೂ. ಖರ್ಚು ಮಾಡಿ ಅವರಿಗೆ ಸಿಕ್ಕಿದ್ದು 1620 ರೂ . ! ಇದಕ್ಕೆ ಸಂಬಂಧಿಸಿದ ಬಿಲ್ ಗಳ ದಾಖಲೆಯನ್ನು ರಾಜಾ ಜೋಪಾನವಾಗಿಇಟ್ಟುಕೊಂಡಿದ್ದಾರೆ.
ಇಲ್ಲಿನ ಕೃಷಿಕರ ಸಂಘದ ಕೇದಾರ್ ಸಿರೋಹಿ ಅವರು ಈ ಖರ್ಚು ಹಾಗು ಆದಾಯದ ವಿವರಗಳನ್ನು ಪ್ರಧಾನಿಗೆ ಟ್ವೀಟ್ ಮಾಡಿದ್ದಾರೆ. 2000 ಕೇಜಿ ಆಲೂಗಡ್ಡೆಗೆ 1 ರೂ. ಸಿಕ್ಕಿದರೆ ಒಂದು ಕೇಜಿಗೆ ಎಷ್ಟು ಆದಾಯ ರೈತನಿಗೆ ಸಿಗುತ್ತದೆ ಎಂದು ಅವರು ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ.
ಈಗ ಈ ಟ್ವೀಟ್ ಜನರ ನಡುವೆ ಚರ್ಚೆಗೆ ಕಾರಣವಾಗಿದೆ. ಪ್ರಧಾನಿಯವರ ಅಚ್ಛೇದಿನ್ ಭರವಸೆಯನ್ನು ನೆನಪಿಸಿ ಜನರು ಈ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ.
2000 किलो आलू की कीमत १ रुपया इसमें बताओ कितना रुपया किलो मिलेगा किसान को ? विद्वान गुना भाग और जोड़ कर बताये |@PMOIndia pic.twitter.com/Kb9Vyh3sH5
— Kedar Sirohi (@KedarSirohi) February 28, 2017