ಮೂಡುಬಿದಿರೆ: ಮಾರ್ಚ್ 7ರಂದು ಕೇಂದ್ರದ ವಿರುದ್ಧ ಬೃಹತ್ ಪ್ರತಿಭಟನೆ
.jpg)
ಮೂಡುಬಿದಿರೆ, ಮಾ.4: ಅಡುಗೆ ಅನಿಲ ಬೆಲೆಯೇರಿಕೆ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾರ್ಚ್ 7 ರಂದು ಬೃಹತ್ ಪ್ರತಿಭಟನೆ ನಡೆಯಲಿದೆಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರಕಾರವು ಗ್ಯಾಸ್ ಸಿಲಿಂಡರ್‌ಗೆ ಏಕಾಏಕಿ 86 ರೂ. ಏರಿಸಿರುವುದರಿಂದ ಸಾಮಾನ್ಯ ಜನರಿಗೆ ತುಂಬಾ ಸಮಸ್ಯೆಯಾಗಿದೆ, ನೋಟ್ ಅಪಮೌಲ್ಯದಿಂದ ಈಗಾಗಲೇ ಕಂಗಾಲಾಗಿರುವ ಜನರು ಕೇಂದ್ರ ಸರಕಾರದ ಒಂದೊಂದೇ ಜನವಿರೋಧಿ ನೀತಿಯಿಂದ ಮತ್ತಷ್ಟು ಕಂಗಾಲಾಗಿದ್ದಾರೆ, ಸದ್ಯದಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಸುವ ಹುನ್ನಾರವನ್ನೂ ಕೇಂದ್ರ ಸರಕಾರ ನಡೆಸುತ್ತಿದೆ. 2016ರ ಅಕ್ಟೋಬರ್‌ನಿಂದ ನಿರಂತರವಾಗಿ ಗ್ಯಾಸ್ ಬೆಲೆ ಏರಿಸುತ್ತಾ ಬಂದಿರುವ ಕೇಂದ್ರ ಸರಕಾರ ಕೇವಲ ನಾಲ್ಕು ತಿಂಗಳ ಅಂತರದಲ್ಲಿ 300 ರೂಪಾಯಿಯಷ್ಟು ಏರಿಸಿರುವುದರಿಂದ ಬಡ ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಅಧಿಕಾರಕ್ಕೇರಿದ ಆರಂಭದಲ್ಲಿ ಅಚ್ಚೇದಿನ್ ಎಂದು ಬೊಬ್ಬಿಡುತ್ತಿದ್ದ ಬಿಜೆಪಿಯವರ ಅಚ್ಚೇದಿನ್ ಇದೇನಾ? ಎಂದವರು ಪ್ರಶ್ನಿಸಿದರು.
ಬ್ಯಾಂಕ್ ವಿಷಯದಲ್ಲೂ ಜನಸಾಮಾನ್ಯರಿಗೆ ತೊಂದರೆ ಕೊಟ್ಟ ಕೇಂದ್ರ ಸರಕಾರ ಇದೀಗ ನಾಲ್ಕಕ್ಕಿಂತ ಹೆಚ್ಚುಬಾರಿ ಕ್ಯಾಶ್ ವಿತ್ ಡ್ರಾ ಮಾಡಿದ್ರೆ ಅಥವಾ ಡಿಪಾಸಿಟ್ ಮಾಡಿದ್ರೆ 150 ರೂ. ತೆರಿಗೆ ವಿಧಿಸಿರುವುದು ಬಡವರ ರಕ್ತ ಹೀರುವ ಧೋರಣೆಯಾಗಿದೆಎಂದವರು ಆರೋಪಿಸಿದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ ಮಾತನಾಡಿ ಮೋದಿ ಅವರು ಮಹಿಳೆಯರ ಚಿನ್ನಾಭರಣದ ಮೇಲೆ ದಾಳಿ ನಡೆಸಿ ಸಂಸ್ಕೃತಿ, ಸಂಸ್ಕಾರದ ಪ್ರತೀಕವಾಗಿರುವ ‘ಬಂಗಾರವನ್ನು ಕಡಿಮೆ ಮಾಡಲು ಹೊರಟು ಮಹಿಳಾ ವಿರೋಧಿಯೆನಿಸಿದ್ದಾರೆ, ಅಧಿಕಾರಕ್ಕೇರುವ ಪೂರ್ವದಲ್ಲಿ ನೀಡಿದ್ದ ಯಾವ ಭರವಸೆಗಳನ್ನೂ ಅವರು ಈಡೇರಿಸಿಲ್ಲ, ಮುಂದಿನ ದಿನಗಳಲ್ಲಿ ಈ ದೇಶದ ಮಹಿಳೆಯರೇ ತಕ್ಕ ಪಾಠ ಕಲಿಸಲಿದ್ದಾರೆಎಂದರು.
ಮಾರ್ಚ್ 7 ರ ಬೆಳಗ್ಗೆ 11 ಗಂಟೆಗೆ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಕಚೆರಿ ಮುಂಭಾಗದಿಂದ ನಾಡಕಚೇರಿವರೆಗೆ ಪ್ರತಿಭಟನೆ ನಡೆಯಲಿದ್ದು, ಪ್ರತಿಭಟನಾ ಸಭೆಯನ್ನುದ್ದೇಶಿಸಿ ಶಾಸಕ ಅಭಯಚಂದ್ರ ಜೈನ್ ಮಾತಾಡಲಿದ್ದಾರೆಂದು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರತ್ನಾಕರ ಮೊಯಿಲಿ ತಿಳಿಸಿದರು.
ಮೂಡಾ ಅಧ್ಯಕ್ಷ ಸುರೇಶ್ ಪ್ರಭು, ಯೂತ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಸನಿಲ್, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







