ಕೊಲ್ಲೂರು ಸಮೀಪದ ಹರವರಿಯಲ್ಲಿ ಪ್ರಾಚೀನ ಶಾಸನ ಪತ್ತೆ

ಉಡುಪಿ, ಮಾ.4: ಕುಂದಾಪುರ ತಾಲೂಕು ಕೊಲ್ಲೂರು ಸಮೀಪದ ಹರವರಿಯಲ್ಲಿ ವಿಜಯನಗರ ಕಾಲದ ಕನ್ನಡ ಶಾಸನ ಪತ್ತೆಯಾಗಿದೆ ಎಂದು ಕರಾವಳಿಯ ಖ್ಯಾತ ಪುರಾತತ್ವ ವಿದ್ವಾಂಸ ಪ್ರೊ.ಟಿ.ಮುರುಗೇಶಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಯತಾಕಾರದ ಸುಮಾರು 110 ಸೆ.ಮೀ ಉದ್ದದ ಕಲ್ಲು ಚಪ್ಪಡಿಯ ಮೇಲ್ಭಾಗವನ್ನು ಕುದುರೆ ಲಾಳಾಕೃತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಮೇಲಿನ ಪಟ್ಟಿಕೆಯಲ್ಲಿ ಸೂರ್ಯ-ಚಂದ್ರ, ಶಿವಲಿಂಗ, ದೀಪದಕಂಭ ಮತ್ತು ರಾಜ ಶಾಸನ ಎಂಬುದರ ಪ್ರತೀಕವಾಗಿ ಚಿತ್ರಿಸಿರುವ ಖಡ್ಗವಿದೆ.
ಶಾಸನದ ಆರಂಭಿಕ ಬರಹ ಸಂಪೂರ್ಣವಾಗಿ ಅಳಿಸಿ ಹೋಗಿದೆ. ಶಾಸನದ ಕೆಳಗಿನ 12 ಸಾಲುಗಳು ಮಾತ್ರ ಸ್ಪಷ್ಟವಾಗಿವೆ.
ಶಾಸನದ ವಿಷಯ:
ಲಭ್ಯ ಶಾಸನದ ಬರಹದ ಪ್ರಕಾರ ಹರವರಿಯ ಭೂಮಿಯನ್ನು ಶ್ರೀತಿಂಮಂಣ ಗುರುರಾಯರಿಗೆ ಆಯುಷ್ಯ ಆರೋಗ್ಯ ಅಭಿವೃದ್ಧಿಯಾಗಲೆಂದು ದೇವರಾಯಪುರದ ಮಹಾಜನಂಗಳಿಗೆ ನೀರನೆರೆದು ದಾನವಾಗಿ ನೀಡಲಾಯಿತೆಂದು ಶಾಸನದಲ್ಲಿ ಹೇಳಲಾಗಿದೆ. ಈ ದಾನ ಶಾಸನಕ್ಕೆ ಸಾಕ್ಷಿಗಳು ತಿಮ್ಮಂಣಗಳು, ಅವಧಾನಿ ನಾಗಂಣಗಳು ಎಂದು ಹೇಳಲಾಗಿದೆ.
ಶಾಸನದ ಮಹತ್ವ:
ಶಾಸನದ ಮೇಲಿನ ಬರಹ ಪೂರ್ತಿಯಾಗಿ ಅಳಿಸಿ ಹೋಗಿರುವುದರಿಂದ, ಶಾಸನ ನೀಡಿದ ರಾಜ ಮನೆತನ ಮತ್ತು ರಾಜ ಯಾರು ಎಂದು ತಿಳಿಯುವುದಿಲ್ಲ. ಆದರೆ ಕರಾವಳಿ ಮತ್ತು ಮಲೆನಾಡಿನಲ್ಲಿ ದೊರೆಯುವ ವಿಜಯನಗರದ ಶಾಸನಗಳಲ್ಲಿ ಶಿವಲಿಂಗವನ್ನು ಪ್ರಭಾವಳಿಯಲ್ಲಿ ತೋರಿಸಲಾಗಿರುತ್ತದೆ. ಹಾಗೂ ಶಾಸನದ ಬರಹದ ಶೈಲಿ ವಿಜಯನಗರದ ಬರಹದ ಶೈಲಿಯನ್ನು ಹೋಲುತ್ತದೆ. ಇವುಗಳ ಆಧಾರದ ಮೇಲೆ ಶಾಸನದ ಕಾಲವನ್ನು ವಿಜಯನಗರದ ಕಾಲದ ಶಾಸನವೆಂದು ಪರಿಗಣಿಸಲಾಗಿದೆ.
ಶಾಸನೋಕ್ತ ತಿಂಮಂಣ ಗುರುರಾಯರನ್ನು ವಿಜಯನಗರದ ಪ್ರಖ್ಯಾತ ಚಕ್ರವರ್ತಿ ಕೃಷ್ಣದೇವರಾಯನ ಪ್ರಧಾನ ಮಂತ್ರಿಯಾಗಿರಬೇಕೆಂದು ಗುರುತಿಸಲಾಗಿದೆ. ದಾನವನ್ನು ಸ್ವೀಕರಿಸಿದ ದೇವರಾಯಪುರದ ಮಹಾಜನಂಗಳು ಶೃಂಗೇರಿಯ ದೇವರಾಯಪುರದ ಮಹಾಜನಗಳೆಂದು ಗುರುತಿಸಲಾಗಿದೆ.
ಈ ಶಾಸನ ಅಧ್ಯಯನದಲ್ಲಿ ತಮಗೆ ಹರವರಿಯ ರವೀಂದ್ರ ಶೆಟ್ಟಿ, ಜಯಕರ ಶೆಟ್ಟಿ, ಕೊಲ್ಲೂರಿನ ಮುರುಳೀಧರ ಹೆಗಡೆ ಮತ್ತು ಸುಬಾಷ್ ಸಹಕರಿಸಿದ್ದರೆಂದು ಪ್ರೊ.ಮುರುಗೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.







