ಆಳ್ವಾಸ್ ಮಹಿಳೆಯರು ಥ್ರೋಬಾಲ್ ಚಾಂಪಿಯನ್ಸ್

ಉಡುಪಿ, ಮಾ.4: ಉಡುಪಿಯ ಎಂಜಿಎಂ ಕಾಲೇಜು, ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಸಹಯೋಗದೊಂದಿಗೆ ಕಾಲೇಜಿನ ಎ.ಎಲ್.ಎನ್. ರಾವ್ ಕ್ರೀಡಾಂಗಣದಲ್ಲಿ ಆಯೋಜಿಸಿದ ಮಂಗಳೂರು ವಿವಿ ಮಹಿಳೆಯರ ಅಂತರ ಕಾಲೇಜು ಥ್ರೋಬಾಲ್ ಟೂರ್ನಿಯನ್ನು ಮೂಡಬಿದರೆಯ ಆಳ್ವಾಸ್ ಕಾಲೇಜು ತಂಡ ಗೆದ್ದುಕೊಂಡಿತು.
ಇಂದು ನಡೆದ ಏಕಪಕ್ಷೀಯ ಫೈನಲ್‌ನಲ್ಲಿ ಆಳ್ವಾಸ್‌ನ ಮಹಿಳೆಯರು ಮಂಗಳೂರಿನ ಪದುವಾ ಕಾಲೇಜು ತಂಡವನ್ನು 25-18, 25-13ರ ನೇರ ಅಂತರದಿಂದ ಹಿಮ್ಮೆಟ್ಟಿಸಿ ಱಪೂರ್ಣಪ್ರಜ್ಞ ರೋಲಿಂಗ್ ಶೀಲ್ಡ್‌ೞನ್ನು ಕೈಗೆತ್ತಿಕೊಂಡಿತು. ಪದುವಾ ಕಾಲೇಜು ತಂಡ ರನ್ನರ್ ಅಪ್ ಸ್ಥಾನ ಪಡೆಯಿತು.
ಮೂಡಬಿದರೆಯ ಆಳ್ವಾಸ್ ಕಾಲೇಜ್ ಆಫ್ ಪಿಜ್ಹಿಕಲ್ ಎಜ್ಯುಕೇಶನ್ ಮೂರನೇ ಸ್ಥಾನವನ್ನು ಪಡೆದರೆ, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಮಹಿಳಾ ತಂಡ ನಾಲ್ಕನೇ ಸ್ಥಾನವನ್ನು ಗೆದ್ದುಕೊಂಡಿತು. ಮಂಗಳೂರು ವಿವಿಗೆ ಸೇರಿದ ಒಟ್ಟು 23 ತಂಡಗಳು ಎರಡು ದಿನಗಳ ಟೂರ್ನಿಯಲ್ಲಿ ಪಾಲ್ಗೊಂಡಿದ್ದವು.
ಮಂಗಳೂರು ಪದುವಾ ಕಾಲೇಜಿನ ಶ್ವೇತಾ ಟೂರ್ನಿಯ ಅತ್ಯುತ್ತಮ ಆಕ್ರಮಣಕಾರಿ ಆಟಗಾರ್ತಿಯ ಪ್ರಶಸ್ತಿಗೆ ಭಾಜನರಾದರೆ, ಚಾಂಪಿಯನ್ ಆಳ್ವಾಸ್ ಕಾಲೇಜಿನ ಸುಪ್ರಿಯಾ ಅತ್ಯುತ್ತಮ ಆಲ್‌ರೌಂಡರ್ ಪ್ರಶಸ್ತಿಯನ್ನು ಗೆದ್ದುಕೊಂಡರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆನರಾ ಬ್ಯಾಂಕಿನ ಕೋರ್ಟ್‌ರೋಡ್ ಶಾಖೆಯ ಚೀಫ್ ಮ್ಯಾನೇಜರ್ ಲೆನಿಟ್ಟಾ ಪಿಂಟೊ ಅವರು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.
ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಅಧ್ಯಕ್ಷ ವೇಣುಗೋಪಾಲ ನೊಂಡಾ, ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕುಸುಮ ಕಾಮತ್, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಜಯಶ್ರೀ ನಾಯಕ್ ಉಪಸ್ಥಿತರಿದ್ದರು.







