ಹಲ್ದೀಘಾಟಿ ಯುದ್ದದ ಬಗ್ಗೆ ಬಿಜೆಪಿ ಶಾಸಕನ ಹೇಳಿಕೆ : ಗೆದ್ದದ್ದು ಅಕ್ಬರ್ ಅಲ್ಲ , ಮಹಾರಾಣಾ ಪ್ರತಾಪ್ ..!

ಜೈಪುರ, ಮಾ.4: ಹಲ್ದೀಘಾಟಿ ಯುದ್ದವೆಂದೇ ಚರಿತ್ರೆಯಲ್ಲಿ ಹೆಸರಾಗಿರುವ , ಮೊಗಲ್ ದೊರೆ ಅಕ್ಬರ್ ಮತ್ತು ರಜಪೂತ ದೊರೆ ಮಹಾರಾಣಾ ಪ್ರತಾಪ್ ನಡುವೆ ನಡೆದ ಯುದ್ದದಲ್ಲಿ ಗೆದ್ದದ್ದು ಅಕ್ಬರ್ ಅಲ್ಲ, ಮಹಾರಾಣ ಪ್ರತಾಪ್ ಎಂದು ರಾಜಸ್ತಾನದ ಶಿಕ್ಷಣ ಸಚಿವ ವಾಸುದೇವ್ ದೇವ್ನಾನಿ ಹೇಳಿದ್ದಾರೆ. ಈ ಯುದ್ದದಲ್ಲಿ ಗೆದ್ದಿರುವುದು ಅಕ್ಬರ್ ಎಂದು ಇತಿಹಾಸದಲ್ಲಿ ದಾಖಲಾಗಿರುವು ಸರಿಯಲ್ಲ ಎಂದವರು ಅಭಿಪ್ರಾಯಪಟ್ಟಿದ್ದಾರೆ.
‘ಪಾಥೇಯ ಕಣ’ ಎಂಬ ರಾಜಸ್ತಾನೀ ಪತ್ರಿಕೆಯ ವಿಶೇಷ ಪುರವಣಿಯನ್ನು ಜೈಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿ ಅವರು ಮಾತನಾಡುತ್ತಿದ್ದರು.
ಈ ಯುದ್ದದಲ್ಲಿ ಅಕ್ಬರ್ ಗೆದ್ದಿರುವುದಾದರೆ ಆತ ಬಳಿಕ ಪದೇ ಪದೇ ಮೇವಾಡದ ಮೇಲೆ ಆಕ್ರಮಣ ಎಸಗಲು ಕಾರಣವೇನಿತ್ತು ಎಂದವರು ಪ್ರಶ್ನಿಸಿದ್ದಾರೆ.
ಮಹಾರಾಣಾ ಪ್ರತಾಪ್ ಎಂದೇ ಹೆಸರಾಗಿದ್ದ ಪ್ರತಾಪ್ ಸಿಂಗ್ ಈಗಿನ ರಾಜಸ್ತಾನ ರಾಜ್ಯದ ಒಂದು ಪ್ರದೇಶವಾಗಿರುವ ಮೇವಾಡದ ರಾಜನಾಗಿದ್ದ. ಇತಿಹಾಸದ ಕೆಲವು ಪುಸ್ತಕಗಳಲ್ಲಿ ಅಕ್ಬರ್ ಶ್ರೇಷ್ಠ ಎಂದು ಹೇಳಲಾಗಿದೆ. ಇನ್ನು ಕೆಲವು ಪುಸ್ತಕಗಳಲ್ಲಿ ಮಹಾರಾಣಾ ಪ್ರತಾಪ್ ಶ್ರೇಷ್ಠ ಎಂಬ ಉಲ್ಲೇಖವಿದೆ. ಇಬ್ಬರಲ್ಲಿ ಯಾರಾದರೂ ಒಬ್ಬರು ಶ್ರೇಷ್ಠರು ಎಂಬುದಂತೂ ಸ್ಪಷ್ಟ ಎಂದ ಸಚಿವರು, ರಾಣಾ ಪ್ರತಾಪರಂತಹ ಶ್ರೇಷ್ಠ ಸೇನಾನಿಗಳ ವಿಷಯದಲ್ಲಿ ಚಾರಿತ್ರಿಕ ವಿಷಯಗಳನ್ನು ವಿಕೃತಗೊಳಿಸಬಾರದು ಎಂದರು.
ಇತಿಹಾಸ ಪಠ್ಯಪುಸ್ತಕದಲ್ಲಿ ಹಲ್ದೀಘಾಟಿ ಯುದ್ದದ ಕುರಿತು ಪರ್ಯಾಯ ಅಭಿಪ್ರಾಯವನ್ನು ಎತ್ತಿತೋರಿಸುವ ಪಾಠವನ್ನು ಸೇರಿಸಬೇಕು ಎಂದು ಬಿಜೆಪಿ ಶಾಸಕ ಮೋಹನಲಾಲ್ ಗುಪ್ತಾ ಸಲಹೆ ಮಾಡಿದ ಬಳಿಕ ಈ ಇತಿಹಾಸ ಪ್ರಸಿದ್ದ ಯುದ್ದದ ಕುರಿತು ವಾದ-ವಿವಾದ ಆರಂಭವಾಗಿತ್ತು. 1576ರಲ್ಲಿ ನಡೆದಿದ್ದ ಹಲ್ದೀಘಾಟಿ ಯುದ್ದದಲ್ಲಿ ಅಕ್ಬರ್ ರಜಪೂತರ ದೊರೆ ಮಹಾರಾಣಾ ಪ್ರತಾಪ್ ವಿರುದ್ಧ ಗೆಲುವು ಸಾಧಿಸಿದ್ದ ಎಂಬುದು ಇತಿಹಾಸದಲ್ಲಿ ದಾಖಲಾಗಿರುವ ವಿಷಯವಾಗಿದೆ.