ಉಡುಪಿ: ಬಾಲಮಂದಿರದ ಬಾಲಕಿಯ 'ಮೊದಲ ತೊದಲು' ಕೃತಿ ಬಿಡುಗಡೆ

ಉಡುಪಿ, ಮಾ.4: ಇಲ್ಲಿನ ನಿಟ್ಟೂರಿನಲ್ಲಿರುವ ಸರಕಾರಿ ಬಾಲಮಂದಿರದ (ಸ್ಟೇಟ್‌ಹೋಮ್) ನಿವಾಸಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆರತಿ ಜೆ.ಮಡಿವಾಳ ಅವರ ನೆನಪು, ಪ್ರೇರಣೆಗಳ ಚೊಚ್ಚಲ ಕೃತಿ 'ಮೊದಲ ತೊದಲು' ಕವನ ಸಂಕಲನವನ್ನು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಅವರು ಶುಕ್ರವಾರ ಶ್ರೀಕೃಷ್ಣ ಮಠದಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವೀಸ್, ರಾಜ್ಯ ಮಕ್ಕಳ ಹಕ್ಕು ಆಯೋಗದ ಸದಸ್ಯೆ ಡಾ.ವನಿತಾ ತೊರವಿ, ಪುಸ್ತಕದ ಪ್ರಕಾಶಕರಾದ ಸಾಲಿಗ್ರಾಮ ಚಿತ್ರಪಾಡಿಯ ಪ್ರೊ. ಉಪೇಂದ್ರ ಸೋಮಯಾಜಿ, ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ ಅಧ್ಯಕ್ಷ ಹಾಗೂ ಕಾರ್ಯಕ್ರಮ ಸಂಯೋಜಕರಾದ ಬಿ.ಕೆ.ನಾರಾಯಣ್ ಉಪಸ್ಥಿತರಿದ್ದರು.
ಮೂಲತ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಹಬ್ಬುನಾಡಿನ ಆರತಿ, ಎಸ್ಸೆಸೆಲ್ಸಿವರೆಗಿನ ವಿದ್ಯಾಭ್ಯಾಸವನ್ನು ಕಾರವಾರದಲ್ಲಿ ಮುಗಿಸಿದ್ದು, ಹೆತ್ತವರನ್ನು ಕಳೆದುಕೊಂಡ ಬಳಿಕ ಇದೀಗ ತನ್ನಿಬ್ಬರು ತಂಗಿಯರೊಂದಿಗೆ ಇಲ್ಲಿನ ಬಾಲಮಂದಿರದಲ್ಲಿದ್ದು ಕಲಿಕೆಯನ್ನು ಮುಂದುವರಿಸಿದ್ದಾರೆ.
ಹೈಸ್ಕೂಲಿನಲ್ಲಿದ್ದಾಗ ಕವಿತೆ ಬರೆಯಲು ಪ್ರಾರಂಭಿಸಿದ ಆರತಿಗೆ ಪ್ರಕೃತಿಯೇ ಇದಕ್ಕೆ ಪ್ರೇರಣೆ ನೀಡಿದೆ. ತನನ ಬದುಕಿನ ನೋವು, ಸಂಕಷ್ಟಗಳ ಅನುಭವವನ್ನೇ ಕವನವಾಗಿ ಕಟ್ಟಿಕೊಟ್ಟಿರುವ ಇವರು ಮುಂದೆ ನರ್ಸಿಂಗ್ ಶಿಕ್ಷಣ ಪಡೆದು, ಜನರ ಸೇವೆಯೊಂದಿಗೆ ತನ್ನ ಕಾಲಮೇಲೆ ಸ್ವತಂತ್ರವಾಗಿ ನಿಲ್ಲಲು ಸಂಕಲ್ಪ ಮಾಡಿದ್ದಾರೆ.
ಇಂದು ಸಮಾರಂಭದಲ್ಲಿ ತನ್ನ ಕವನವನ್ನು ವಾಚಿಸಿದ ಆರತಿಯನ್ನು ಪೇಜಾವರ ಶ್ರೀಗಳು ಸನ್ಮಾನಿಸಿ ಆಶೀರ್ವದಿಸಿದರು. ವಾಸುದೇವ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







