ಮುಂಬೈಗೆ ಶಿವಸೇನೆ ಮೇಯರ್ : ಕಣದಿಂದ ಹಿಂದೆ ಸರಿದ ಬಿಜೆಪಿ

ಮುಂಬೈ,ಮಾ.4: ಮಾ.8ರಂದು ನಡೆಯಲಿರುವ ಮೇಯರ್ ಹುದ್ದೆ ಚುನಾವಣೆ ಯಲ್ಲಿ ಬಿಜೆಪಿ ಸ್ಪರ್ಧಿಸುವುದಿಲ್ಲವೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಶನಿವಾರ ಇಲ್ಲಿ ಪ್ರಕಟಿಸುವುದರೊಂದಿಗೆ ಮುಂಬೈ ಮೇಯರ್ ಆಗಿ ಶಿವಸೇನೆ ಅಭ್ಯರ್ಥಿಯ ಆಯ್ಕೆಗೆ ವೇದಿಕೆ ಸಜ್ಜುಗೊಂಡಿದೆ. ಬಿಜೆಪಿಯ ನಿರ್ಧಾರವನ್ನು ತನ್ನ ಸರಕಾರದ ಸ್ಥಿರತೆಯನ್ನು ಕಾಯ್ದುಕೊಳ್ಳಲು ಶಿವಸೇನೆಗೆ ‘ಶರಣಾಗತಿ’ ಎಂದು ಅರ್ಥೈಸಬೇಕಿಲ್ಲ ಎಂದು ಫಡ್ನವೀಸ್ ಇದೇ ವೇಳೆ ಸ್ಪಷ್ಟಪಡಿಸಿದರು. ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಸಮ್ಮಿಶ್ರ ಸರಕಾರವಿದೆ.
ಪೌರಾಡಳಿತದಲ್ಲಿ ನಮ್ಮ ಪಾರದರ್ಶಕ ಅಜೆಂಡಾದಲ್ಲಿ ವಿಶ್ವಾಸ ಹೊಂದಿದ ಮುಂಬೈಯಿಗರು ಬಿಜೆಪಿಗೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಶಿವಸೇನೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ ನಾವು ಅವರಿಗಿಂತ ಕೇವಲ ಎರಡು ಸ್ಥಾನಗಳಿಂದ ಹಿಂದೆ ಬಿದ್ದಿದ್ದೇವೆ. ನಮ್ಮದೇ ಆದ ಮೇಯರ್ ಹೊಂದಲು ಅಗತ್ಯ ಸಂಖ್ಯಾಬಲ ನಮ್ಮ ಬಳಿಯಿಲ್ಲ ಎಂದು ಇಲ್ಲಿಯ ತನ್ನ ಅಧಿಕೃತ ಬಂಗಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಫಡ್ನವೀಸ್ ಹೇಳಿದರು.
ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶಿವಸೆೇನೆ 84 ಮತ್ತು ಬಿಜೆಪಿ 82 ಸ್ಥಾನಗಳನ್ನು ಗೆದ್ದಿವೆ.
ಬಿಎಂಸಿಯ ಉಪಮೇಯರ್,ಸ್ಥಾಯಿ,ಸುಧಾರಣೆ ಮತ್ತು ಶಿಕ್ಷಣ ಸಮಿತಿ ಹುದ್ದೆಗಳಿಗೆ ಹಾಗು ಬಿಇಎಸ್ಟಿ ಸಮಿತಿಯ ಅಧ್ಯಕ್ಷೀಯ ಹುದ್ದೆಗೂ ಬಿಜೆಪಿ ಸ್ಪರ್ಧಿಸುವುದಿಲ್ಲ ಎಂದು ಫಡ್ನವೀಸ್ ತಿಳಿಸಿದರು.