10ಕೋಟಿ ವೆಚ್ಚದಲ್ಲಿ ರಂಗಮಂದಿರ ನಿರ್ಮಾಣಕ್ಕೆ ಯೋಜನೆ: ರಂಗಹಬ್ಬ ಉದ್ಘಾಟಿಸಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿಕೆ

ಉಡುಪಿ, ಮಾ.4: ಉಡುಪಿ ನಗರದ ಬೀಡಿನಗುಡ್ಡೆಯಲ್ಲಿ ಸುಮಾರು 10ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಜಿಲ್ಲಾ ರಂಗ ಮಂದಿರವನ್ನು ನಿರ್ಮಿಸಲು ಯೋಜಿಸಲಾಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವಸಬಲೀಕರಣ ಹಾಗೂ ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಸುಮನಸಾ ಕೊಡವೂರು ವತಿಯಿಂದ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಸಂಸ್ಕೃತಿ ನಿರ್ದೇಶಾನಲಯ ನವದೆಹಲಿ, ಪೇಜಾವರ ಅಧೋಕ್ಷಜ ಮಠದ ಸಹಯೋಗದೊಂದಿಗೆ ಅಜ್ಜರಕಾಡು ಭುಜಂಗ ಪಾರ್ಕ್ ಬಯಲು ರಂಗಮಂದಿರದಲ್ಲಿ ಆಯೋಜಿಸಲಾದ ಏಳು ದಿನಗಳ ಱರಂಗಹಬ್ಬ- 5ೞನಾಟಕೋತ್ಸವವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಬೀಡಿನಗುಡ್ಡೆಯ ತಾತ್ಕಾಲಿಕ ಮೀನು ಮಾರುಕಟ್ಟೆ ತೆರವಾಗಿರುವ ಜಾಗ ದಲ್ಲಿ ಇಡೀ ದೇಶದಲ್ಲೇ ಅತ್ಯಂತ ವಿಶಿಷ್ಟ ರೀತಿಯ ರಂಗ ಮಂದಿರವನ್ನು ನಿರ್ಮಿಸುವ ಅಪೇಕ್ಷೆ ಹೊಂದಿದ್ದು, ಇದಕ್ಕೆ ಪ್ರಥಮ ಹಂತದಲ್ಲಿ ಐದು ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಸಚಿವ ಉಮಾಶ್ರೀ ಹಾಗೂ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಬೇಡಿಕೆ ಇಡಲಾಗಿದೆ ಎಂದರು.
ಇಂದು ನಾಟಕ ಹಾಗೂ ಯಕ್ಷಗಾನಗಳ ಗುಣಮಟ್ಟ ಕಡಿಮೆ ಆಗುತ್ತಿದೆ. ಜನರ ಅಭಿರುಚಿಗೆ ತಕ್ಕ ರೀತಿಯಲ್ಲಿ ಬದಲಾವಣೆ, ಮಾರ್ಪಾಡು ಮಾಡು ತ್ತಿರುವುದರಿಂದ ನಾಟಕಗಳು ತನ್ನ ಮೂಲ ಸತ್ವವನ್ನೇ ಕಳೆದುಕೊಳ್ಳುತ್ತಿವೆ. ಇಂದು ಸಂದೇಶ ಸಾರುವ ನಾಟಕಗಳಿಂತ ಮನರಂಜನೆ ನೀಡುವ ನಾಟಕ ಗಳಿಗೆ ಜನ ಆಕರ್ಷಿತರಾಗುತ್ತಿದ್ದಾರೆ. ಇದರಿಂದ ರಂಗಕರ್ಮಿಗಳು ಜಿಜ್ಞಾಸೆಗೆ ಒಳಗಾಗುತ್ತಿದ್ದಾರೆ ಎಂದು ಅವರು ಹೇಳಿದರು.
ಲಕ್ಷ್ಮಿನಾರಾಯಣ ಭಟ್ ಕೆ. ಅವರಿಗೆ ರಂಗ ಸಾಧಕ ಸನ್ಮಾನ ನೆರವೇರಿಸಲಾಯಿತು. ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ವಹಿಸಿದ್ದರು. ಅದಾನಿ ಯುಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಆಳ್ವ, ರಂಗಕರ್ಮಿ ನಾಗೇಶ್ ಉದ್ಯಾವರ, ಕಲ್ಮಾಡಿ ಶ್ರೀಬ್ರಹ್ಮಬೈದೇರುಗಳ ಗರೋಡಿಯ ಗೌರವಾಧ್ಯಕ್ಷ ಅಚ್ಯುತ ಕಲ್ಮಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ ಉಪಸ್ಥಿತರಿದ್ದರು.
ಸಂಸ್ಥೆಯ ಗೌರವಾಧ್ಯಕ್ಷ ಎಂ.ಎಸ್.ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಸ್ವಾಗತಿಸಿದರು. ಕಾರ್ಯದರ್ಶಿ ಅಕ್ಷತ್ ಅಮೀನ್ ವಂದಿಸಿದರು. ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಿರಂತರ ಫೌಂಡೇಶನ್ ಮೈಸೂರು ತಂಡದಿಂದ ಸುಗುಣ ಎಂ.ಎಂ. ನಿರ್ದೇಶನದ ಱರಸ್ತೆ ನಕ್ಷತ್ರೞನಾಟಕ ಪ್ರದರ್ಶನಗೊಂಡಿತು.







