ಆರೆಸ್ಸೆಸ್ ಮುಖಂಡ ಚಂದ್ರಾವತ್ ವಿರುದ್ಧ ಪ್ರಕರಣ ದಾಖಲು
ಉಜ್ಜೈನಿ, ಮಾ.4: ವಿವಾದಾತ್ಮಕ ಹೇಳಿಕೆ ನೀಡಿರುವ ಆರೆಸ್ಸೆಸ್ ಮುಖಂಡ ಕುಂದನ್ ಚಂದ್ರಾವತ್ ವಿರುದ್ಧ ಮಧ್ಯಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಮಧ್ಯೆ, ಚಂದ್ರಾವತ್ ಅವರನ್ನು ಉಜ್ಜೈನಿ ಮಹಾನಗರ ಸಹ ಪ್ರಚಾರ ಪ್ರಮುಖ್ ಹುದ್ದೆಯಿಂದ ವಜಾಗೊಳಿಸಿರುವುದಾಗಿ ಆರೆಸ್ಸೆಸ್ ತಿಳಿಸಿದೆ.
ಚಂದ್ರಾವತ್ ವಿರುದ್ಧ ಐಪಿಸಿ ಸೆಕ್ಷನ್ 505(1)(ಬಿ)ಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅವರನ್ನು ಬಂಧಿಸಲಾಗಿಲ್ಲ ಎಂದು ಉಜ್ಜೈನಿ ಜಿಲ್ಲಾ ಪೊಲೀಸ್ ಸುಪರಿಂಟೆಂಡೆಂಟ್ ಮನೋಹರ್ ವರ್ಮ ತಿಳಿಸಿದ್ದಾರೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಲೆ ಕತ್ತರಿಸಿದವರಿಗೆ ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದ ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಚಂದ್ರಾವತ್, ತಾವು ಈ ಹೇಳಿಕೆ ಹಿಂಪಡೆಯುವುದಾಗಿ ತಿಳಿಸಿದ್ದಾರೆ. ಸ್ವಯಂಸೇವಕರ ಕೊಲೆ ಪ್ರಕರಣದಿಂದ ನೊಂದು, ಭಾವನಾತ್ಮಕವಾಗಿ ಈ ಹೇಳಿಕೆ ನೀಡಿದ್ದೆ. ಅಲ್ಲದೆ ಕೇರಳದಿಂದ ಕೊಲೆ ಬೆದರಿಕೆ ಕರೆ ಕೂಡಾ ಬಂದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ತನ್ನನ್ನು ಗುರಿಯಾಗಿರಿಸಿಕೊಂಡು ಅಭಿಯಾನ ಸಾಗುತ್ತಿದೆ. ಇವೆಲ್ಲದರಿಂದ ಸಾಕಷ್ಟು ನೊಂದಿದ್ದೇನೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.