ಕೃಷಿ ಬಿಕ್ಕಟ್ಟಿಗೆ ಸರಕಾರಗಳ ನೀತಿಯೇ ಕಾರಣ: ವೆಂಕಟೇಶ್ ಕೋಣಿ

ಕುಂದಾಪುರ, ಮಾ.4: ಪ್ರತಿ 26 ನಿಮಿಷಕ್ಕೊಬ್ಬ ರೈತ ಆತ್ಮಹತ್ಯೆಗೆ ಕಾರಣ ವಾಗಿರುವ ಇಂದಿನ ಕೃಷಿ ಬಿಕ್ಕಟ್ಟಿಗೆ ಕಳೆದ 25 ವರ್ಷಗಳ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕೃಷಿ ನೀತಿಗಳೇ ಕಾರಣ. ರೈತ ಕೃಷಿಕೂಲಿಕಾರರನ್ನು ಹಳ್ಳಿ ಮತ್ತು ಕೃಷಿಯಿಂದ ಆಚೆ ದೂಡಿ, ಕೃಷಿಯನ್ನು ದೇಶಿ ವಿದೇಶಿ ಕಂಪೆನಿಗಳಿಗೆ ವಹಿಸಿಕೊಡುವ ಉದ್ದೇಶ ಹೊಂದಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ಕೋಣಿ ಆರೋಪಿಸಿದ್ದಾರೆ.
ಕೃಷಿ ಆಧಾರಿತ ಸಂಘದ ಹಂಗಳೂರು ಗ್ರಾಮ ಸಮಿತಿ ನೇತೃತ್ವದಲ್ಲಿ ಹಂಗಳೂರು ಗ್ರಾಪಂ ಕಛೇರಿ ವಠಾರದಲ್ಲಿ ಶನಿವಾರ ಮನೆ ನಿವೇಶನ ರಹಿತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಯು. ದಾಸ ಭಂಡಾರಿ ಮಾತನಾಡಿ, ಕುಂದಾಪುರ ವಿಧಾನಸಭಾ ಕ್ಷೇತ್ರದ ಮನೆ ನಿವೇಶನ ರಹಿತ ಅರ್ಜಿದಾರರ ಭೂಮಿ ಹಕ್ಕಿಗಾಗಿ ಎ.11ರಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮನೆ ಮುಂದೆ ಧರಣಿ ಸತ್ಯಾಗ್ರಹವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕೃಷಿಕೂಲಿಕಾರರ ಸಂಘದ ಮುಖಂಡರಾದ ರಾಜೀವ ಪಡುಕೋಣೆ, ಪದ್ಮಾವತಿ ಶೆಟ್ಟಿ, ಕುಶಲ, ನಾಗರತ್ನ, ವಿಲ್ಸನ್ ಮೊದಲಾದವರು ಉಪಸ್ಥಿತರಿ ದ್ದರು.





