ಅಫ್ಘಾನ್: ವಾಯುದಾಳಿಗೆ 8 ನಾಗರಿಕರು ಬಲಿ?

ಕಾಬುಲ್,ಮಾ.4: ಪಶ್ಚಿಮ ಅಫ್ಘಾನಿಸ್ತಾನ ಫರಾಹ್ ಪ್ರಾಂತ್ಯದಲ್ಲಿ ಶನಿವಾರ ನಡೆದ ದಾಳಿಯೊಂದರಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಕನಿಷ್ಠ ಎಂಟು ಮಂದಿ ಅಫ್ಘಾನ್ ನಾಗರಿಕರು ಸಾವನ್ನಪ್ಪಿದ್ದಾರೆಂದು ಅಫ್ಘಾನಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ ಈ ಅಮಾಯಕರ ಸಾವಿಗೆ ನಿಖರವಾದ ಕಾರಣವೇನೆಂಬ ಬಗ್ಗೆ ವ್ಯತಿರಿಕ್ತವಾದ ವರದಿಗಳು ಪ್ರಕಟವಾಗಿವೆೆ.
ರಸ್ತೆ ಬದಿಯಲ್ಲಿ ನಡೆದ ಬಾಂಬ್ ಸ್ಫೋಟದಿಂದಾಗಿ ಈ ಸಾವುಗಳು ಸಂಭವಿಸಿವೆಯೆಂದು ಫರಾಹ್ ಪ್ರಾಂತದ ಗವರ್ನರ್‌ರ ವಕ್ತಾರರಾದ ಮುಹಮ್ಮದ್ ನಸೀರ್ ಮೆಹ್ರಿ ಹೇಳಿದ್ದರೆ, ವಾಯುದಾಳಿಯಿಂದಾಗಿ ತಮ್ಮ ಬಂಧುಗಳು ಮೃತಪಟ್ಟಿರುವುದಾಗಿ ಮೃತರ ಸಂಬಂಧಿಕರು ಹೇಳಿದ್ದಾರೆ.
ಘಟನೆ ಬಗ್ಗೆ ತನಿಖೆ ನಡೆಯುತ್ತಿರುವುದಾಗಿ ಅಫ್ಘಾನಿಸ್ತಾನದ ರಕ್ಷಣಾ ಇಲಾಖೆಯ ವಕ್ತಾರ ಜ. ಡೇವಿಸ್ ವಾರಿಝಿ ತಿಳಿಸಿದ್ದಾರೆ.
Next Story





