ಸೇವಾ ಮನೋಭಾವ ಬೆಳೆಸಿಕೊಳ್ಳಿ: ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್

ಮಂಗಳೂರು, ಮಾ. 4: ಪದವಿ ಪಡೆದು ಹೊರಗೆ ಹೋಗುವ ವಿದ್ಯಾರ್ಥಿಗಳು ಕೇವಲ ಸಂಪಾದನೆಗೆ ಸೀಮಿತಗೊಳ್ಳಬಾರದು. ನಿಮ್ಮದೇ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ಸಮಾಜದ ಸೇವೆ ನೀಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್ ಅವರು ಹೇಳಿದರು.
ಅವರು ಎ.ಜೆ. ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಶನಿವಾರ ನಡೆದ ಪದವಿ ಪ್ರದಾನ ಹಾಗೂ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ನಾವು ಕೈಗೊಳ್ಳುವ ಕಠಿಣ ನಿರ್ಧಾರ ಹಾಗೂ ಉತ್ತಮ ಆಯ್ಕೆ ಭವಿಷ್ಯ ರೂಪಿಬಹುದು. ಶಿಕ್ಷಣದಿಂದ ಹೊರತಾಗಿ ಸಮಾಜದಲ್ಲಿ ಕಲಿಯುವ ಸಂಗತಿಗಳು ಬಹಳಷ್ಟಿದೆ. ನಮ್ಮ ಪ್ರತಿಯೊಂದು ಕಾರ್ಯ ಸಮಾಜದ ಒಳಿತಿಗಾಗಿ ಹಾಗೂ ಬಡವರ ಅಭಿವೃದ್ಧಿಗಾಗಿ ಇರಲಿ ಎಂದು ಜಿಲ್ಲಾಧಿಕಾರಿ ಹೇಳಿದರು.
ಗೌರವ ಅತಿಥಿ ನಿಟ್ಟೆ ವಿಶ್ವವಿದ್ಯಾಲಯ ಚಾನ್ಸಲರ್ ಡಾ.ಎಂ.ಶಾಂತಾರಾಮ ಶೆಟ್ಟಿ ಮಾತನಾಡಿ, ಸಮಾಜದಿಂದ ಪಡೆದ ಮನ್ನಣೆಯನ್ನು ಪುನಃ ಸಮಾಜಕ್ಕೆ ಮರಳಿಸುವ ಜವಾಬ್ದಾರಿ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಇರಬೇಕು. ತೀವ್ರ ಪೈಪೋಟಿ ಇರುವ ಇಂದಿನ ಕಾಲದಲ್ಲಿ ಆತ್ಮವಿಶ್ವಾಸ, ಸಂವಹನ ಕೌಶಲ್ಯ, ವಿಶ್ವಾಸಾರ್ಹತೆ, ಪಾರದರ್ಶಕ ವ್ಯಕ್ತಿತ್ವವನ್ನು ಬದುಕಿನಲ್ಲಿ ರೂಢಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಎಜೆ ಶೆಟ್ಟಿ ಅವರು ಕನಸು ನನಸಾಗುವವರೆಗೆ ವಿರಮಿಸುವುದಿಲ್ಲ. ಸಾಧಿಸಿ ತೋರಿಸುವ ಛಲ ಅವರದ್ದು, ಇವರ ಸಾಧನೆ ಎಲ್ಲರಿಗೂ ಮಾದರಿಯಾ ಎಂದು ಅವರು ಶ್ಲಾಘನೆ ವ್ಯಕ್ತಪಡಿಸಿದರು.
ಎಜೆ ಸಮೂಹ ಸಂಸ್ಥೆಯ ಮುಖ್ಯಸ್ಥ ಡಾ. ಎ.ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡೀನ್ ಡಾ.ಅಶೋಕ್ ಹೆಗ್ಡೆ ಪ್ರತಿಜ್ಞಾ ವಿಧಿ ಬೋಧಿಸಿದರು. ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ, ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ, ಡಾ.ರಮೇಶ್ ಪೈ, ಕ್ರೀಡಾಪಟು ಪಿಟಿ ಉಷಾ ಉಪಸ್ಥಿತರಿದ್ದರು.
ಸಮಾರಂಭದಲ್ಲಿ 109 ಪದವಿ, 60 ಸ್ನಾತಕೋತ್ತರ ಪದವಿ ಹಾಗೂ ಸೂಪರ್ ಸ್ಪೆಷಾಲಿಟಿ ವಿಭಾಗದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾನಿಲಯ ಹಾಗೂ ಕಾಲೇಜಿನ ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಿತು.







