ಚೀನಾದ ರಕ್ಷಣಾ ವೆಚ್ಚ್ಲ ಶೇ.7ರಷ್ಟು ಏರಿಕೆ

ಬೀಜಿಂಗ್, ಮಾ.4: ಈ ವರ್ಷ ತನ್ನ ರಕ್ಷಣಾ ವೆಚ್ಚದಲ್ಲಿ ಶೇ.7ಷ್ಟು ಏರಿಕೆ ಮಾಡಿರುವುದಾಗಿ ನೆರೆಯ ರಾಷ್ಟ್ರವಾದ ಚೀನಾವು ಶನಿವಾರ ಘೋಷಿಸಿದೆ ಹಾಗೂ ತನ್ನ ಪ್ರಾಂತೀಯ ವಿವಾದಗಳ ಬಗ್ಗೆ ‘ಹೊರಗಿನವರು’ ಮೂಗುತೂರಿಸುವುದಂತೆ ತಡೆಯುವುದಾಗಿ ಅದು ಪ್ರತಿಜ್ಞೆ ಮಾಡಿದೆ.
ಚೀನಾದ ಸಂಸತ್ ‘ ರಾಷ್ಟ್ರೀಯ ಜನತಾ ಕಾಂಗ್ರೆಸ್’ನ ವಾರ್ಷಿಕ ಸಭೆಗೆ ಮುನ್ನ ಸಂಸತ್ ವಕ್ತಾರೆ ಫು ಯಿಂಗ್ ಅವರು ಚೀನಾದ ರಕ್ಷಣಾ ವೆಚ್ಚದಲ್ಲಿ ಏರಿಕೆ ಮಾಡಿರುವುದನ್ನು ಘೋಷಿಸಿದರು.
ಚೀನಾದ ರಕ್ಷಣಾ ವೆಚ್ಚವು ದೇಶದ ಒಟ್ಟು ಆಂತರಿಕ ಉತ್ಪನ್ನದ ಶೇ.1.3ರ ಆಸುಪಾಸಿನಲ್ಲಿ ಸ್ಥಿರಗೊಳ್ಳಲಿದೆಯೆಂದು ಆಕೆ ತಿಳಿಸಿದ್ದಾರೆ. ‘‘ದೇಶದ ಗಡಿವಿವಾದಗಳನ್ನು ಮಾತುಕತೆ ಹಾಗೂ ಸಮಾಲೋಚನೆಯ ಮೂಲಕ ಶಾಂತಿಯುತವಾಗಿ ಬಗೆಹರಿಸಲು ನಾವು ಕರೆ ನೀಡುತ್ತಿದ್ದೇವೆ. ಇದೇ ವೇಳೆ, ದೇಶದ ಸಾರ್ವಭೌಮತೆ ಹಾಗೂ ಹಿತಾಸಕ್ತಿಗಳು ಮತ್ತು ಹಕ್ಕುಗಳನ್ನು ರಕ್ಷಿಸುವಂತಹ ಸಾಮರ್ಥ್ಯವನ್ನು ಹೊಂದುವ ಅಗತ್ಯ ನಮಗಿದೆ’’ ಎಂದು ಫು ತಿಳಿಸಿದ್ದಾರೆ.
ಅಮೆರಿಕದ ರಕ್ಷಣಾ ವೆಚ್ಚದಲ್ಲಿ ಶೇ.10ರಷ್ಟು ಏರಿಕೆಯನ್ನು ಮಾಡುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬಳಿಕ ಚೀನಾ ಕೂಡಾ ತನ್ನ ರಕ್ಷಣಾ ವೆಚ್ಚದಲ್ಲಿ ಏರಿಕೆ ಮಾಡಿರುವುದಾಗಿ ಪ್ರಕಟಿಸಿದೆ. 600 ಶತಕೋಟಿ ಡಾಲರ್‌ನ ಅಮೆರಿಕದ ರಕ್ಷಣಾ ಬಜೆಟ್‌ನಲ್ಲಿ ಶೇ.10ರಷ್ಟು ಏರಿಕೆಯೊಂದಿಗೆ ಸುಮಾರು 54 ಶತಕೋಟಿ ಡಾಲರ್ ಹೆಚ್ಚುವರಿಯಾಗಿ ಸೇರ್ಪಡೆಗೊಳ್ಳಲಿದೆ.
ಚೀನಾ ತನ್ನ ಪ್ರಸಕ್ತ ರಕ್ಷಣಾ ಬಜೆಟ್‌ನ ಹೆಚ್ಚಿನ ಭಾಗವನ್ನು ನೌಕಾಪಡೆಯ ಅಭಿವೃದ್ಧಿಗಾಗಿ ಮೀಸಲಿಡುವ ನಿರೀಕ್ಷೆಯಿದೆ. ಸಾಗರೋತ್ತರದೇಶಗಳಲ್ಲಿ ಹೆಚ್ಚುತ್ತಿರುವ ತನ್ನ ಪ್ರಭಾವವನ್ನು ಕಾಪಾಡಿಕೊಳ್ಲುವುದು ಹಾಗೂ ಏಶ್ಯ-ಪೆಸಿಫಿಕ್ ಪ್ರಾಂತದಲ್ಲಿನ ಅಸ್ಥಿರ ಭದ್ರತಾ ಪರಿಸ್ಥಿತಿಗೆ ಪ್ರತಿಕ್ರಿಯಿಸುವ ಉದ್ದೇಶದಿಂದ ಅದು ಈ ಕ್ರಮ ಕೈಗೊಂಡಿದೆಯೆಂದು ಸೇನಾವಿಶ್ಲೇಷಕರು ತಿಳಿಸಿದ್ದಾರೆ.ದಕ್ಷಿಣ ಚೀನಾ ಸಮುದ್ರ ಹಾಗೂ ಪೂರ್ವ ಚೀನಾ ಸಮುದ್ರದಲ್ಲಿನ ವಿದ್ಯಮಾನಗಳು ತನಗೆ ಆತಂಕವನ್ನುಂಟು ಮಾಡಿದೆಯೆಂದು ಚೀನಾ ಹೇಳಿಕೊಳ್ಳುತ್ತಿದೆ.







