ಅಪ್ರಾಪ್ತೆಯ ಮೇಲೆ ಅತ್ಯಾಚಾರ ಪ್ರಕರಣ : ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲು

ಕಣ್ಣೂರು, ಮಾ.4: ಚರ್ಚ್‌ನ ಪಾದ್ರಿಯೋರ್ವರು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಐವರು ಕ್ರೈಸ್ತ ಸನ್ಯಾಸಿನಿಯರೂ ಸೇರಿದಂತೆ 8 ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜಿಲ್ಲೆಯ ಕುತುಪರಂಬ ಪಟ್ಟಣದ ಖಾಸಗಿ ಆಸ್ಪತ್ರೆಯ ಮುಖ್ಯಸ್ಥರು, ಇತರ ಇಬ್ಬರು ಮತ್ತು ಐವರು ಕ್ರೈಸ್ತ ಸನ್ಯಾಸಿನಿಯರ ವಿರುದ್ಧ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಆರೋಪದ ಮೇಲೆ ಫೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.
ಅಲ್ಲದೆ ಪ್ರಕರಣದಲ್ಲಿ ಸತ್ಯಾಂಶವನ್ನು ಮುಚ್ಚಿಡಲು ಯತ್ನಿಸಿದ ಬಗ್ಗೆ ವಯನಾಡ್ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರ ವಿರುದ್ದ ಮಕ್ಕಳ ಹಕ್ಕು ರಕ್ಷಣೆಯ ರಾಜ್ಯ ಆಯೋಗಕ್ಕೆ ವರದಿಯನ್ನೂ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕ್ರೈಸ್ತ ಪಾದ್ರಿ ರಾಬಿನ್ ಅಲಿಯಾಸ್ ಮ್ಯಾಥ್ಯೂ ವದಕ್ಕಂಚೆರಿಲ್ ತನ್ನ ಅಪ್ರಾಪ್ತ ಪುತ್ರಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತ ಬಾಲಕಿಯ ತಾಯಿ ನೀಡಿದ ದೂರಿನ ಬಳಿಕ ಪಾದ್ರಿಯನ್ನು ಫೆ.28ರಂದು ಬಂಧಿಸಲಾಗಿತ್ತು.





