ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಗೆ ಅತ್ಯುತ್ತಮ ಸಂವಹನಕಾರ ಪ್ರಶಸ್ತಿ

ಬೆಂಗಳೂರು, ಮಾರ್ಚ್ 4: ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ ನೀಡುವ ಅತ್ಯುತ್ತಮ ಸಂವಹನಕಾರ ಪ್ರಶಸ್ತಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅವರು ಪಡೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಆಯೋಜಿಸಲಾಗಿದ್ದ 11 ನೇ ಜಾಗತಿಕ ಸಂವಹನ ಸಮ್ಮೇಳನದಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಜಾಹೀರಾತು ವಿಭಾಗಕ್ಕೆ ಎರಡು ಪ್ರಶಸ್ತಿಗಳು, ಪ್ರಕಟಣಾ ವಿಭಾಗಕ್ಕೆ ಒಟ್ಟು ಮೂರು ಪ್ರಶಸ್ತಿಗಳು ಲಭಿಸಿದ್ದು, ಗಾಂಧೀ ಕುರಿತ ಪುಸ್ತಕ ಈ ಪೈಕಿ ಸೇರಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೊರತಂದಿರುವ ಗಾಂಧೀಜಿ ಕುರಿತ ಪುಸ್ತಕಕ್ಕೆ ಅತ್ಯುತ್ತಮ ಪ್ರಕಟಣೆ ಪ್ರಶಸ್ತಿ ಲಭಿಸಿದೆ.
ಇಲಾಖೆಯ ಉಪ ನಿರ್ದೇಶಕರಾದ ಬಸವರಾಜ ಕಂಬಿ ಹಾಗೂ ಹೆಚ್.ಬಿ. ದಿನೇಶ್ ಅವರು ಪ್ರಶಸ್ತಿ ಸ್ವೀಕರಿಸಿದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿ ಡಾ: ಚಂದ್ರಶೇಖರ ಕಂಬಾರ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ವಿವಿಧ ವಿಭಾಗಗಳಿಗೆ ಸಂಬಂಧಿಸಿದಂತೆ ಒಟ್ಟು 6 ಪ್ರಶಸ್ತಿಗೆ ಭಾಜನವಾಗಿರುವ ಕರ್ನಾಟಕ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತನ್ನ ವಿನೂತನ ಕಾರ್ಯಗಳಿಂದ ವಿಶೇಷ ಸ್ಥಾನವನ್ನು ಪಡೆದಿದೆ ಎಂದರೆ ಅತೀಶಯೋಕ್ತಿಯಾಗಲಾರದು.





