ಬಸ್ ಉರುಳಿ 45 ಮಂದಿಗೆ ಗಾಯ: ಇಬ್ಬರ ಸ್ಥಿತಿ ಗಂಭೀರ
ವೀರಾಜಪೇಟೆ, ಮಾ.4: ವೀರಾಜಪೇಟೆ-ಕಣ್ಣನೂರು ಅಂತರರಾಜ್ಯ ಹೆದ್ದಾರಿಯ ಪೆರಂಬಾಡಿ ತಿರುವು ರಸ್ತೆಯಲ್ಲಿ ಶನಿವಾರ ಶಾಲಾ ಪ್ರವಾಸಿ ಬಸ್ ಮಗುಚಿ 45 ಮಂದಿ ಗಾಯಗೊಂಡಿದ್ದು,ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ವಿವರ: ಕೇರಳದ ಇರಿಟಿ ಸಮೀಪದ ಉಳಿಯಿಲ್ ಎಂಬಲ್ಲಿನ ಮಜ್ಲಿಸ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲಿನ 218 ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಮೂರು ಬಸ್‌ಗಳಲ್ಲಿ ಕೊಡಗಿನ ಪ್ರವಾಸಿ ತಾಣಗಳಿಗೆ ಶೈಕ್ಷಣಿಕ ಪ್ರವಾಸಕ್ಕಾಗಿ ತೆರಳಿದ್ದರು ಎನ್ನಲಾಗಿದೆ.
ವೀರಾಜಪೇಟೆ ನಗರ ತಲುಪಲು ಕೇವಲ 6 ಕಿ.ಮೀ ಇರುವಾಗಲೇ ಮತ್ತೊಂದು ವಾಹನಕ್ಕೆ ದಾರಿ ಮಾಡಿ ಕೊಡುವಾಗ ಬಸ್ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದೆ. ಪರಿಣಾಮವಾಗಿ ಬಸ್‌ನಲ್ಲಿದ್ದ ಒಟ್ಟು 60 ವಿದ್ಯಾರ್ಥಿನಿಯರಲ್ಲಿ 45 ಮಂದಿಗೆ ಗಾಯಗಳಾಗಿ ವೀರಾಜಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಹೆಚ್ಚಿನವರನ್ನು ಪ್ರಥಮ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ. ಇವರ ಪೈಕಿ ಗಂಭೀರ ಗಾಯಾಳು ಚಾಲಕ ಅಬ್ದುಲ್ ಜಲೀಲ್(36)ರನ್ನು ಮಡಿಕೇರಿ ಆಸ್ಪತ್ರೆಗೆ ಹಾಗೂ ಶ್ರೇಯಾನ್(16)ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಇರಿಟ್ಟಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಫಾತಿಮಾ(13), ಅನುಶ್ರೀ(14), ಅಹಲ್ಯಾ(14), ಫರ್‌ಹಾನ(15), ಅಫೀದ್(15), ಸಾಹಿರಾ ಬಾನು(14), ನಿದಾ(14), ಶಿರಿನ್(14) ಮುಂತಾದವರು ಗಾಯಗೊಂಡಿದ್ದಾರೆ.ವೀರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.







