ಚಿಂತಕ,ಸಾಹಿತಿ ಕಿರ್ವಳೆಗೆ ಅಶ್ರುಪೂರ್ಣ ವಿದಾಯ

ಕೊಲ್ಲಾಪುರ,ಮಾ.4: ಶುಕ್ರವಾರ ಕೊಲೆಯಾದ ಖ್ಯಾತ ಚಿಂತಕ,ಸಂಶೋಧಕ ಹಾಗೂ ದಲಿತ ಸಾಹಿತಿ ಡಾ.ಕೃಷ್ಣ ಕಿರ್ವಳೆ ಅವರ ಅಂತ್ಯಸಂಸ್ಕಾರವು ಶನಿವಾರ ಸಂಜೆ ಇಲ್ಲಿಯ ಪಂಚಗಂಗಾ ಘಾಟ್ ಚಿತಾಗಾರದಲ್ಲಿ ಸಾವಿರಾರು ಜನರ ಅಶ್ರುಪೂರ್ಣ ವಿದಾಯದ ನಡುವೆ ನೆರವೇರಿತು.
ಇದಕ್ಕೂ ಮುನ್ನ ಕಿರ್ವಳೆಯವರ ರಾಜೇಂದ್ರ ನಗರ ಪ್ರದೇಶದಲ್ಲಿಯ ಬಿಂದು ಚೌಕ್ ನಿವಾಸಕ್ಕೆ ಧಾವಿಸಿದ ಸಹಸ್ರಾರು ಜನರು ಅಗಲಿದ ಸಾಹಿತಿಗೆ ಅಂತಿಮ ಗೌರವಗಳನ್ನು ಸಲ್ಲಿಸಿದರು.
ಕೊಲೆ ಆರೋಪಿ, ವೃತ್ತಿಯಲ್ಲಿ ಕಾರ್ಪೆಂಟರ್ ಅಗಿರುವ ಪ್ರೀತಮ್ ಜಿ.ಪಾಟೀಲ್ (30) ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ವ್ಯಾಪಕ ಶೋಧ ಕಾರ್ಯಾ ಚರಣೆ ನಡೆಸುತ್ತಿದ್ದಾರೆ.
ಪಾಟೀಲ್ ಕಿರ್ವಳೆಯರ ನಿವಾಸದಲ್ಲಿ ಕೆಲವು ಪೀಠೋಪಕರಣಗಳ ಕೆಲಸ ಮಾಡಿದ್ದು, 25,000 ರೂ.ಗಳ ವಿಷಯದಲ್ಲಿ ವಿವಾದವೆದ್ದಿತ್ತು. ಶುಕ್ರವಾರ ಸಂಜೆ ಇದೇ ಕಾರಣದಿಂದ ಕಿರ್ವಳೆಯವರೊಂದಿಗೆ ಜಗಳವಾಡಿದ ಪಾಟೀಲ್ ಅವರನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಿರ್ವಳೆ ಪತ್ನಿ ಕಲ್ಪನಾ ಮತ್ತು ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಪಿಎಚ್‌ಡಿ ವಿದ್ಯಾರ್ಥಿನಿಯಾಗಿರುವ ಪುತ್ರಿ ಅನಘಾ ಅವರನ್ನು ಅಗಲಿದ್ದಾರೆ.
ಕಿರ್ವಳೆಯವರ ಹತ್ಯೆಯನ್ನು ವಿರೋಧಿಸಿ ಕೆಲವು ಸಂಘಟನೆಗಳು ಬಂದ್ ಕರೆಯನ್ನು ನೀಡಿದ್ದ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.







