ಹರ್ಯಾಣ ಸರಕಾರ ಭರವಸೆಯನ್ನು ಇನ್ನೂ ಈಡೇರಿಸಿಲ್ಲ: ಸಾಕ್ಷಿ ಮಲಿಕ್

ಹೊಸದಿಲ್ಲಿ,ಮಾ.4: ರಿಯೋ ಗೇಮ್ಸ್‌ನಲ್ಲಿ ಐತಿಹಾಸಿಕ ಪದಕ ಗೆದ್ದುಕೊಂಡ ಬಳಿಕ ಹರ್ಯಾಣ ಸರಕಾರ ತನಗೆ ನೀಡಿದ್ದ ಬಹುಮಾನಗಳ ಭರವಸೆಯನ್ನು ಇನ್ನೂ ಈಡೇರಿಸಿಲ್ಲ ಎಂದು ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್ ಬೇಸರ ವ್ಯಕ್ತಪಡಿಸಿದರು.
ರಿಯೋ ಒಲಿಂಪಿಕ್ಸ್‌ನಲ್ಲಿ ದೇಶಕ್ಕಾಗಿ ಪದಕವನ್ನು ಜಯಿಸುವ ಮೂಲಕ ತನ್ನ ಭರವಸೆಯನ್ನು ಈಡೇರಿಸಿದ್ದೆ. ಹರ್ಯಾಣ ಸರಕಾರ ತನ್ನ ಭರವಸೆಯನ್ನು ಇನ್ನಾದರೂ ಈಡೇರಿಸುವುದೇ? ಎಂದು ಸಾಕ್ಷಿ ಟ್ವೀಟ್ ಮಾಡಿದ್ದಾರೆ.
ನಾನು ಒಲಿಂಪಿಕ್ಸ್ ಪದಕ ಗೆದ್ದ ನಂತರ ಹರ್ಯಾಣ ಸರಕಾರ ಮಾಡಿರುವ ಪ್ರೋತ್ಸಾಹದ ಧನ ಘೋಷಣೆ ಕೇವಲ ಮಾಧ್ಯಮ ಪ್ರಚಾರಕ್ಕೆ ಸೀಮಿತವಾಗಿದೆಯೇ? ಎಂದು ಸಾಕ್ಷಿ ಟ್ವೀಟ್ ಮಾಡಿದ್ದಾರೆ.
2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಕುಸ್ತಿ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ ಭಾರತದ ಮೊದಲ ಕುಸ್ತಿತಾರೆ ಎನಿಸಿಕೊಂಡಿದ್ದ ಸಾಕ್ಷಿ ಐತಿಹಾಸಿಕ ಸಾಧನೆ ಮಾಡಿದ್ದರು. ಸಾಕ್ಷಿಯ ಸಾಧನೆಯನ್ನು ಪರಿಗಣಿಸಿ ಹರ್ಯಾಣ ಸರಕಾರ ಕನಿಷ್ಠ 3.5 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಿತ್ತು.
ಒಲಿಂಪಿಕ್ಸ್ ಆರಂಭಕ್ಕೆ ಮೊದಲೇ ಹರ್ಯಾಣ ಸರಕಾರ ಒಲಿಂಪಿಕ್ಸ್‌ನಲ್ಲಿ ಸಾಧನೆ ಮಾಡುವ ರಾಜ್ಯದ ಕ್ರೀಡಾಳುಗಳಿಗೆ ನಗದು ಬಹುಮಾನವನ್ನು ಘೋಷಿಸಿತ್ತು. ಚಿನ್ನ ಗೆದ್ದವರಿಗೆ 6 ಕೋ.ರೂ. ಬೆಳ್ಳಿ ಗೆದ್ದವರಿಗೆ 4 ಕೋ.ರೂ. ಹಾಗೂ ಬೆಳ್ಳಿ ಜಯಿಸಿದವರಿಗೆ 2.5 ಕೋ.ರೂ. ಬಹುಮಾನವನ್ನು ನೀಡುವುದಾಗಿ ಪ್ರಕಟಿಸಿತ್ತು. ಹರ್ಯಾಣದ ರೋಹ್ಟಕ್ ಜಿಲ್ಲೆಯ 24ರ ಹರೆಯದ ಸಾಕ್ಷಿ 58 ಕೆಜಿ ತೂಕ ವಿಭಾಗದಲ್ಲಿ ಕಂಚಿನ ಪದಕವನ್ನು ಜಯಿಸಿದ್ದರು.







