ಹೈದರಾಬಾದ್‌ಗೆ ಸೋಲುಣಿಸಿದ ಕರ್ನಾಟಕ
ವಿಜಯ್ ಹಝಾರೆ ಟ್ರೋಫಿ ಏಕದಿನ ಟೂರ್ನಮೆಂಟ್

ಕೋಲ್ಕತಾ, ಮಾ.4: ವಿಜಯ್ ಹಝಾರೆ ಟ್ರೋಫಿ ಏಕದಿನ ಟೂರ್ನಮೆಂಟ್‌ನ ಕನಿಷ್ಠ ಮೊತ್ತದ ರೋಚಕ ಪಂದ್ಯದಲ್ಲಿ ಕರ್ನಾಟಕ ತಂಡ ಹೈದರಾಬಾದ್ ತಂಡವನ್ನು 1 ವಿಕೆಟ್‌ಗಳ ಅಂತರದಿಂದ ಮಣಿಸಿತು. ಈ ಮೂಲಕ ಡಿ ಗುಂಪಿನಲ್ಲಿ ಸತತ 5ನೆ ಪಂದ್ಯವನ್ನು ಗೆದ್ದುಕೊಂಡು ಅಜೇಯ ಗೆಲುವಿನ ಓಟ ಮುಂದುವರಿಸಿತು.
ಇಲ್ಲಿನ ಐತಿಹಾಸಿಕ ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿರುವ ಹೈದರಾಬಾದ್ ತಂಡ 44 ಓವರ್‌ಗಳಲ್ಲಿ ಕೇವಲ 108 ರನ್‌ಗೆ ಆಲೌಟಾಯಿತು. ಕರ್ನಾಟಕದ ಆಲ್‌ರೌಂಡರ್ ಕೆ. ಗೌತಮ್(5-28) ಶಿಸ್ತುಬದ್ಧ ಬೌಲಿಂಗ್ ದಾಳಿ ನಡೆಸಿ ಡಿ ಗುಂಪಿನಲ್ಲಿ ಸತತ 4 ಪಂದ್ಯಗಳನ್ನು ಜಯಿಸಿ ಬೀಗುತ್ತಿದ್ದ ಹೈದರಾಬಾದ್ ತಂಡವನ್ನು ಕನಿಷ್ಠ ಮೊತ್ತಕ್ಕೆ ಕಟ್ಟಿಹಾಕಿದರು.
ಹೈದರಾಬಾದ್‌ನ ಪರ ನಾಯಕ ಎಸ್.ಬದ್ರಿನಾಥ್(18) ಸರ್ವಾಧಿಕ ಸ್ಕೋರ್ ದಾಖಲಿಸಿದರು. ಭಂಡಾರಿ(17) ಎರಡಂಕೆ ಸ್ಕೋರ್ ದಾಖಲಿಸಿದರು.
ಗೆಲ್ಲಲು 109 ರನ್ ಸವಾಲನ್ನು ಪಡೆದಿದ್ದ ಕರ್ನಾಟಕಕ್ಕೆ ಗೆಲುವು ಸುಲಭವಾಗಿ ಲಭಿಸಲಿಲ್ಲ. ಹೈದರಾಬಾದ್‌ನ ಮಿಲಿಂದ್(3-42), ಮುಹಮ್ಮದ್ ಸಿರಾಜ್(3-24) ಹಾಗೂ ರವಿ ಕಿರಣ್(2-32) ಕರ್ನಾಟಕ ಬ್ಯಾಟ್ಸ್‌ಮನ್‌ಗೆ ಸವಾಲೊಡ್ಡಿದರು. ಅಜೇಯ 35 ರನ್ ಗಳಿಸಿದ ವಿನಯಕುಮಾರ್ ಕರ್ನಾಟಕ ತಂಡ 29.2 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 109 ರನ್ ಗಳಿಸಲು ನೆರವಾದರು.
ಕರ್ನಾಟಕದ ಪರ ಮಾಯಾಂಕ್ ಅಗರವಾಲ್(26), ಕೆ.ಗೌತಮ್(16) ಹಾಗೂ ಸ್ಟುವರ್ಟ್ ಬಿನ್ನಿ(14) ಎರಡಂಕೆ ಸ್ಕೋರ್ ದಾಖಲಿಸಿದ್ದರು.
ಸಂಕ್ಷಿಪ್ತ ಸ್ಕೋರ್
ಹೈದರಾಬಾದ್: 44 ಓವರ್‌ಗಳಲ್ಲಿ 108 ರನ್‌ಗೆ ಆಲೌಟ್
(ಬದ್ರಿನಾಥ್ 18, ಭಂಡಾರಿ 17, ಕೆ.ಗೌತಮ್ 5-28)
ಕರ್ನಾಟಕ: 29.2 ಓವರ್‌ಗಳಲ್ಲಿ 109/9
(ವಿನಯಕುಮಾರ್ ಅಜೇಯ 35, ಅಗರವಾಲ್ 26, ಸಿರಾಜ್ 3-24, ಮಿಲಿಂದ್ 3-42, ರವಿಕಿರಣ್ 2-32)







