ಕ್ರೈಸ್ತಧರ್ಮಗುರು ಟಾಮ್ ಸುರಕ್ಷಿತ ಬಿಡುಗಡೆಗೆ ಒತ್ತಾಯಿಸಿ ಕ್ರೈಸ್ತ ಧರ್ಮೀಯರಿಂದ ಮೋಂಬತ್ತಿ ಮೆರವಣಿಗೆ

ಬೆಂಗಳೂರು, ಮಾ.4: ಕ್ರೈಸ್ತ ಧರ್ಮಗುರು ವಂ. ಟಾಮ್ ಉಝುನ್ನಲಿಲ್ ಅವರು ಯೆಮೆನ್‌ನಲ್ಲಿ ಅಪಹರಣಕ್ಕೊಳಗಾಗಿ ವರ್ಷ ಕಳೆದಿದ್ದು, ಈ ಹಿನ್ನೆಲೆಯಲ್ಲಿ ‘ ಇಂಡಿಯಾ ವಾಂಟ್ಸ್ ಟು ನೋ( ಭಾರತ ತಿಳಿದುಕೊಳ್ಳಲು ಬಯಸುತ್ತಿದೆ) ಎಂಬ ಬ್ಯಾನರ್ ಹಿಡಿದುಕೊಂಡು , ಟಾಮ್ ಅವರ ಸುರಕ್ಷಿತ ಬಿಡುಗಡೆಗೆ ಒತ್ತಾಯಿಸಿ ಸಾವಿರಾರು ಕ್ರೈಸ್ತ ಧರ್ಮೀಯರು ಮೋಂಬತ್ತಿ ಮೆರವಣಿಗೆ ನಡೆಸಿದರು.
ವಂ. ಟಾಮ್ ಅವರ ಸುರಕ್ಷಿತ ಬಿಡುಗಡೆಗೆ ಒತ್ತಾಯಿಸಿ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ಸ್ ಚರ್ಚ್‌ನಲ್ಲಿ ಶನಿವಾರ ಸಂಜೆ ನಡೆದ ಈ ಮೆರವಣಿಗೆಯಲ್ಲಿ ಬೆಂಗಳೂರು ನಗರಾದ್ಯಂತದ ಕ್ರೈಸ್ತ ಧರ್ಮಕೇಂದ್ರದಿಂದ ಬಂದ ಸಾವಿರಾರು ಧರ್ಮಗುರುಗಳು, ಕ್ರೈಸ್ತ ಸನ್ಯಾಸಿನಿಯರು ಹಾಗೂ ಕ್ರೈಸ್ತ ಧರ್ಮೀಯರು ಪಾಲ್ಗೊಂಡಿದ್ದರು. ಆರ್ಚ್‌ಬಿಷಪ್ ಡಾ. ಬೆರ್ನಾರ್ಡ್ ಮೊರಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಮೋಂಬತ್ತಿ ಹಿಡಿದುಕೊಂಡು ಪಾಲ್ಗೊಂಡರು. ಮಂಡ್ಯ ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಆ್ಯಂಟನಿ ಕರಿಯಿಲ್ ಮುಂತಾದವರು ಉಪಸ್ಥಿತರಿದ್ದರು. ವಂ. ಟಾಮ್ ಅವರ ಸುರಕ್ಷಿತ ಬಿಡುಗಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುವ ಮನವಿಯನ್ನು ರಾಷ್ಟ್ರಪತಿ, ಪ್ರಧಾನಿ, ಕರ್ನಾಟಕದ ಮುಖ್ಯಮಂತ್ರಿ ಹಾಗೂ ಗೃಹಸಚಿವರಿಗೆ ಸಲ್ಲಿಸಲಾಯಿತು.





