ಮೊದಲ ಏಕದಿನ: ಮೊರ್ಗನ್ ಶತಕ, ಇಂಗ್ಲೆಂಡ್‌ಗೆ ಗೆಲುವು

ಸೈಂಟ್‌ಜಾನ್ಸ್, ಮಾ.4: ಇಯಾನ್ ಮೊರ್ಗನ್ ಸಿಡಿಸಿದ 10ನೆ ಶತಕ, ತಲಾ ನಾಲ್ಕು ವಿಕೆಟ್ ಪಡೆದ ವೇಗಿಗಳಾದ ಲಿಯಾಮ್ ಪ್ಲುಂಕೆಟ್ ಹಾಗೂ ಕ್ರಿಸ್ ವೋಕ್ಸ್ ನೆರವಿನಿಂದ ಇಂಗ್ಲೆಂಡ್ ತಂಡ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ನ ವಿರುದ್ಧ 45 ರನ್‌ಗಳ ಅಂತರದಿಂದ ಜಯ ಸಾಧಿಸಿತು.
ಜನವರಿಯಲ್ಲಿ ಭಾರತದಲ್ಲಿ ನಡೆದ ಏಕದಿನ ಸರಣಿಯಲ್ಲಿನ ಶ್ರೇಷ್ಠ ಫಾರ್ಮ್‌ನ್ನು ಮುಂದುವರಿಸಿದ ಇಂಗ್ಲೆಂಡ್ ನಾಯಕ ಮೊರ್ಗನ್ ಶತಕ ಗಳಿಸಿ (107ರನ್, 116 ಎಸೆತ, 11 ಬೌಂಡರಿ, 2 ಸಿಕ್ಸರ್)ಇಂಗ್ಲೆಂಡ್ ತಂಡ 6 ವಿಕೆಟ್‌ಗಳ ನಷ್ಟಕ್ಕೆ 296 ರನ್ ಗಳಿಸಲು ನೆರವಾದರು. ಅಗ್ರ ಕ್ರಮಾಂಕದಲ್ಲಿ ಸ್ಯಾಮ್ ಬಿಲ್ಲಿಂಗ್ಸ್ (52) ಹಾಗೂ ಆಲ್‌ರೌಂಡರ್ ಬೆನ್ ಸ್ಟೋಕ್ಸ್(55) ಅರ್ಧಶತಕದ ಕೊಡುಗೆ ನೀಡಿದ್ದರು.
ಗೆಲ್ಲಲು ಕಠಿಣ ಸವಾಲು ಪಡೆದಿದ್ದ ವಿಂಡೀಸ್ ತಂಡ ಪ್ಲುಂಕೆಟ್ ಹಾಗೂ ವೋಕ್ಸ್ ದಾಳಿಗೆ ತತ್ತರಿಸಿ 48ನೆ ಓವರ್‌ನಲಿ 251ರನ್‌ಗೆ ಆಲೌಟಾಯಿತು. ಜೇಸನ್ ಮುಹಮ್ಮದ್(72) ಹಾಗೂ ಜೋನಾಥನ್ ಕಾರ್ಟರ್ ಅರ್ಧಶತಕ ಸಿಡಿಸಿದರೂ ತಂಡದ ಗೆಲುವಿಗೆ ಇದು ಸಾಕಾಗಲಿಲ್ಲ. ವಿಂಡೀಸ್‌ನ ಕೊನೆಯ ವಿಕೆಟ್ ಉರುಳಿಸಿದ ಪ್ಲುಂಕೆಟ್ ಜೀವನಶ್ರೇಷ್ಠ ಬೌಲಿಂಗ್(4-40)ಮಾಡಿದರು. ವಿಂಡೀಸ್‌ಗೆ ಆರಂಭದಲ್ಲೇ ಆಘಾತ ನೀಡಿದ ವೋಕ್ಸ್ 47 ರನ್‌ಗೆ 4 ವಿಕೆಟ್ ಪಡೆದರು.





