ಇನ್ನು ದುಬಾರಿಯಾಗಲಿದೆ ಥರ್ಡ್ ಪಾರ್ಟಿ ಕಾರು ವಿಮೆ

ಹೊಸದಿಲ್ಲಿ, ಮಾ.5: ರಸ್ತೆ ಅಪಘಾತಗಳಲ್ಲಿ ತೀವ್ರವಾಗಿ ಗಾಯಗೊಳ್ಳುವ ಪ್ರಕರಣಗಳಲ್ಲಿ ವಿಮಾ ಕಂಪೆನಿಗಳ ಥರ್ಡ್ ಪಾರ್ಟಿ ಹೊಣೆಗಾರಿಕೆಗೆ ಗರಿಷ್ಠ ಮಿತಿ ಹೇರಲು ಸರ್ಕಾರ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಥರ್ಡ್ ಪಾರ್ಟಿ ಕಾರು ವಿಮೆ ಇನ್ನು ದುಬಾರಿಯಾಗಲಿದೆ.
2017-18ರಿಂದ ಬಹುತೇಕ ಎಲ್ಲ ವರ್ಗದ ವಿಮೆಗಳಿಗೆ ಕಂತನ್ನು ಶೇಕಡ 50ರಷ್ಟು ಹೆಚ್ಚಿಸುವ ಪ್ರಸ್ತಾವವನ್ನು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಮುಂದಿಟ್ಟಿದೆ.
ವಾಹನಗಳ ಮಾಲಕರು ಥರ್ಡ್ ಪಾರ್ಟಿ ವಿಮೆ ಮಾಡಿಸುವುದು ಕಡ್ಡಾಯವಾಗಿದ್ದು, ಸ್ವಂತ ಹಾನಿಯ ವಿಮೆ ಐಚ್ಛಿಕವಾಗಿರುತ್ತದೆ. ಸಮಗ್ರ ವಿಮಾ ಪಾಲಿಸಿಗಳಲ್ಲಿ ಎರಡೂ ಅಂಶಗಳು ಸೇರಿರುತ್ತವೆ. ಆದರೆ ಥರ್ಡ್ ಪಾರ್ಟಿ ವಿಮೆ ಕೇವಲ 30 ಶೇಕಡಕ್ಕೆ ಸೀಮಿತವಾಗಿರುತ್ತದೆ. ಆದರೆ ಮಾರುತಿ ಆಲ್ಟೊ, ಟಾಟಾ ನ್ಯಾನೊ, ದಸ್ತೂನ್, ಪಿಕಪ್ ವ್ಯಾನ್ ಹಾಗೂ ಮಿನಿ ಟ್ರಕ್‌ಗಳಿಗೆ ಥರ್ಡ್ ಪಾರ್ಟಿ ವಿಮಾ ಕಂತನ್ನು ಐಆರ್‌ಡಿಎ ಹೆಚ್ಚಿಸಿಲ್ಲ. ಆದರೆ 1,000- 1,500 ಸಿಸಿ ಇಂಜಿನ್‌ಗಳ ಕಾರುಗಳ ವಿಮಾ ಕಂತನ್ನು ಶೇಕಡ 50ರಷ್ಟು ಹೆಚ್ಚಿಸಿದೆ. ಅಂತಿಮವಾಗಿ ಶೇಕಡ 25ರಿಂದ 30ರಷ್ಟು ಏರಿಕೆಯಾಗಬಹುದು ಎಂದು ಮೂಲಗಳು ಹೇಳಿವೆ. ಮೋಟಾರು ವಾಹನ (ತಿದ್ದುಪಡಿ) ಮಸೂದೆ ಆಂಗೀಕಾರವಾದರೆ ಮತ್ತೆ ವಾಹನ ವಿಮೆ ಹೆಚ್ಚಲಿದೆ. ಈ ತಿದ್ದುಪಡಿ ಮಸೂದೆ ಅನ್ವಯ, ಮೋಟಾರು ವಾಹನ ಕ್ಲೇಮ್ ನ್ಯಾಯಮಂಡಳಿ ನಿಗದಿಪಡಿಸುವ ಎಲ್ಲ ಪರಿಹಾರ ಮೊತ್ತವನ್ನು ವಿಮಾ ಕಂಪೆನಿಗಳೇ ಪಾವತಿಸಬೇಕಾಗುತ್ತದೆ.