ಬಿಸಿಯೂಟಕ್ಕೆ ಆಧಾರ್ ಕಡ್ಡಾಯ: ’ಮಕ್ಕಳ ಆಹಾರದ ಹಕ್ಕಿನ ಮೇಲೆ ದಾಳಿ’!

ಹೊಸದಿಲ್ಲಿ, ಮಾ.5: ಸರ್ಕಾರದ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಪ್ರಯೋಜನ ಪಡೆಯಲು ಆಧಾರ್ ಸಂಖ್ಯೆಯನ್ನು ನೀಡುವುದು ಕಡ್ಡಾಯ ಎಂಬ ಆದೇಶವನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹೊರಡಿಸಿದೆ.
ಸರ್ಕಾರದ ಅಧಿಸೂಚನೆಯ ಪ್ರಕಾರ, ಈ ಯೋಜನೆಯ ಅನುಷ್ಠಾನದಲ್ಲಿ ಅಡುಗೆಯವರು ಹಾಗೂ ಸಹಾಯಕರಾಗಿ ಸೇವೆ ಸಲ್ಲಿಸುವವರು ಕೂಡಾ ಆಧಾರ್ ಸಂಖ್ಯೆಯನ್ನು ನೀಡಬೇಕಾಗುತ್ತದೆ. ಆಧಾರ್ ಸಂಖ್ಯೆಯನ್ನು ನೀಡಲು ಜೂನ್ 30 ಕೊನೆಯ ದಿನವಾಗಿರುತ್ತದೆ.
ಆದರೆ ಕೇಂದ್ರದ ಈ ನಡೆಯನ್ನು ಆಹಾರದ ಹಕ್ಕು ಆಂದೋಲನ ಎಂಬ ಸಂಘಟನೆ ಕಟುವಾಗಿ ಟೀಕಿಸಿದೆ. ಇದು ಮಕ್ಕಳ ಆಹಾರದ ಹಕ್ಕಿನ ಮೇಲಿನ ನೇರ ದಾಳಿಯಾಗಿದ್ದು, ತಕ್ಷಣ ಈ ಅಧಿಸೂಚನೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದೆ. ಇದು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನ್ವಯ ಮಕ್ಕಳಿಗೆ ಆಹಾರ ಒದಗಿಸುವುದು ಕಡ್ಡಾಯ. ಮಧ್ಯಾಹ್ನದ ಬಿಸಿಯೂಟ ಯೋಜನೆಯಿಂದ ಶಾಲೆಗಳ ಹಾಜರಾತಿ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನುವುದು ಹಲವು ಅಧ್ಯಯನಗಳಿಂದ ದೃಢಪಟ್ಟಿದೆ. ಇದಕ್ಕೆ ಯಾವುದೇ ಷರತ್ತುಗಳನ್ನು ವಿಧಿಸುವಂತಿಲ್ಲ ಎಂದು ಪ್ರಕಟನೆಯಲ್ಲಿ ಪ್ರತಿಪಾದಿಸಲಾಗಿದೆ.





