15ವರ್ಷ ಬಾಲಕಿಯ ಅತ್ಯಾಚಾರ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

ತೊಡುಪುಝ,ಮಾರ್ಚ್ 5: 15ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಇಡುಕ್ಕಿ ಜಿಲ್ಲಾ ಸೆಶನ್ಸ್ ಕೋರ್ಟು ಆರೋಪಿ ಯುವಕನಿಗೆ ಜೀವಾವಧಿ ಶಿಕ್ಷೆ ಮತ್ತು 23,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಪೋಸ್ಕೊ ಕಾನೂನು ಪ್ರಕಾರ ಬಂಧಿಸಲಾಗಿದ್ದ ಕುಟ್ಟಂಬುಯ ಮಾಮಲಕಂಡಂನ ಬಿಜು(34)ವಿಗೆ ಸೆಶನ್ಸ್ ನ್ಯಾಯಾಧೀಶ ಕೆ.ಆರ್. ಮಧುಕುಮಾರ್ ಮೇಲಿನ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. 2015ರ ಮಾರ್ಚ್ 28ಕ್ಕೆ ಘಟನೆ ನಡೆದಿತ್ತು.
ಶಾಲಾ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿನಿಯನ್ನು ಆರೋಪಿ ಘಟನೆಯ ದಿವಸ ಹಾಸ್ಟೆಲ್‌ಗೆ ಬೆಳಗ್ಗೆ 11ಗಂಟೆಗೆ ತೆರಳಿ ವಾರ್ಡನ್‌ನಲ್ಲಿ ವಿದ್ಯಾರ್ಥಿನಿಯ ಸೋದರಮಾವನಿಗೆ ಹಾವು ಕಚ್ಚಿದೆ. ಮನೆಗೆ ಕರೆದುಕೊಂಡು ಹೋಗಲು ತಾನು ಬಂದಿದ್ದೇನೆ ಎಂದು ವಾರ್ಡನ್‌ಗೆ ತಿಳಿಸಿದ್ದ. ನಂತರ ವಿದ್ಯಾರ್ಥಿನಿಯನ್ನುಆಟೊದಲ್ಲಿ ಕರೆದುಕೊಂಡು ಹೋಗಿ ಕಾಡಿನ ದಾರಿಯಲ್ಲಿ ಆಟೋದಿಂದ ಇಳಿಸಿದ್ದ. ಕಾಡಿನ ಒಳದಾರಿಯಲ್ಲಿ ಹೋಗೋಣ ಎಂದು ಹೇಳಿ ಕಾಡಿನೊಳಗೆ ಕರೆದು ಕೊಂಡು ಹೋಗಿ ವಿದ್ಯಾರ್ಥಿನಿಯನ್ನು ಅತ್ಯಾಚಾರ ವೆಸಗಿದ್ದಾನೆ ಎಂದು ಪ್ರಕರಣ ದಾಖಲಾಗಿತ್ತು.
ಅವನಿಂದ ತಪ್ಪಿಸಿಕೊಂಡು ಓಡಿದ್ದ ವಿದ್ಯಾರ್ಥಿನಿಯನ್ನು ಬೆಂಬತ್ತಿ ಆತ ಅತ್ಯಾಚಾರವೆಸಗಿದ್ದಾನೆ. ನಂತರ ಆ್ಯಸಿಡ್ ಎರಚಲು ಪ್ರಯತ್ನಿಸಿದ್ದಾನೆ. ಬಾಲಕಿ ತಪ್ಪಿಸಿಕೊಂಡದ್ದರಿಂದ ಅವಳ ಬಟ್ಟೆಗೆ ಆ್ಯಸಿಡ್ ಬಿದ್ದಿತ್ತು. ಆರೋಪಿಯನ್ನು ಘಟನೆ ನಡೆದು ಒಂದು ವರ್ಷದ ಬಳಿಕ ಅಂಗಮಾಲಿ ಪೊಲೀಸರು ಬಂಧಿಸಿದ್ದರು ಎಂದು ವರದಿತಿಳಿಸಿದೆ.





