ಕೇರಳ ಮುಖ್ಯಮಂತ್ರಿ, ಬಿಜೆಪಿಯ ಕುಮ್ಮನಂರ ಭದ್ರತೆಯಲ್ಲಿ ಹೆಚ್ಚಳ
_7_3_5.jpg)
ತಿರುವನಂತಪುರಂ,ಮಾ.5: ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹೆಚ್ಚುವರಿ ನಾಲ್ವರು ಕಮಾಂಡೊಗಳನ್ನು ಅವರ ಭದ್ರತಾವ್ಯವಸ್ಥೆಯಲ್ಲಿ ಸೇರ್ಪಡೆಗೊಳಿಸಲಾಗಿದೆ. ರಾಜ್ಯ ಭದ್ರತಾ ಪರಿಶೀಲನಾ ಸಮಿತಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್‌ರ ಭದ್ರತೆಯನ್ನೂ ಹೆಚ್ಚಿಸಲು ನಿರ್ಧರಿಸಲಾಗಿದೆ. ಈಗ ಆರು ಪೊಲೀಸ್ ಅಧಿಕಾರಿಗಳನ್ನು ಹೊಂದಿರುವ ತಂಡ ಮುಖ್ಯಮಂತ್ರಿಯ ಭದ್ರತಾಹೊಣೆಯನ್ನು ನಿರ್ವಹಿಸುತ್ತಿದೆ. ಹೊಸ ತೀರ್ಮಾನ ಪ್ರಕಾರ ನಾಲ್ಕು ಕಮಾಂಡೊಗಳನ್ನು ಹೆಚ್ಚುವರಿಯಾಗಿ ಮುಖ್ಯಮಂತ್ರಿಯ ಭದ್ರತೆಗೆ ನಿಯೋಜಿಸಲಾಗುವುದು.
ಆರೆಸ್ಸೆಸ್ ಸಹಿತ ಕೆಲವು ಸಂಘಟನೆಗಳಿಂದ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗೆ ಹೆಚ್ಚಿನ ಭದ್ರತೆ ನೀಡಲು ತೀರ್ಮಾನಿಸಲಾಯಿತು. ಇತ್ತೀಚೆಗೆ ಪಿಣರಾಯಿ ವಿಜಯನ್‌ರ ತಲೆ ತೆಗೆಯುವವರಿಗೆ ಉಜೈನಿಯ ಆರೆಸ್ಸೆಸ್ ನಾಯಕ ಕುಂದನ್ ಚಂದ್ರಾವತ್ ಒಂದು ಕೋಟಿ ರೂಪಾಯಿ ಬಹುಮಾನವನ್ನು ಘೋಷಿಸಿದ್ದರು. ಇದಲ್ಲದೆ ಪಿಣರಾಯಿ ವಿಜಯನ್‌ರ ಮಂಗಳೂರು ಸಂದರ್ಶನದ ವಿರುದ್ಧ ಸಂಘಪರಿವಾರ ಹರತಾಳ ಹಮ್ಮಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಇಂಟಲಿಜೆನ್ಸ್ ವಿಭಾಗದ ಶಿಫಾರಸಿನಂತೆ ಮುಖ್ಯ ಮಂತ್ರಿಗೆ ಹೆಚ್ಚಿನ ಭದ್ರತೆಯನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ವರದಿತಿಳಿಸಿದೆ.