ಕೇರಳದಲ್ಲಿ ಪ.ಬಂಗಾಳದಿಂದ ತರಿಸಿದ ಅಕ್ಕಿ ನಾಳೆಯಿಂದ 500 ಕೇಂದ್ರಗಳಲ್ಲಿ ವಿತರಣೆ
.jpg)
ತಿರುವನಂತಪುರಂ,ಮಾ.5: ಬೆಲೆಯೇರಿಕೆಯನ್ನು ನಿಯಂತ್ರಿಸಲಿಕ್ಕಾಗಿ ಕೇರಳ ಸರಕಾರ ಪಶ್ಚಿಮಬಂಗಾಳದಿಂದ ತರಿಸಿರುವ ಅಕ್ಕಿಯನ್ನು ಕಡಿಮೆ ಬೆಲೆಗೆ ಸೋಮವಾರದಿಂದ ಕೇರಳಾದ್ಯಂತ 500 ಕೇಂದ್ರಗಳಲ್ಲಿ ವಿತರಿಸಲಾಗುತ್ತಿದೆ. ಬಳಕೆದಾರರ ಅಂಗಡಿಗಳು, ತ್ರೀವೇಣಿ ಅಂಗಡಿ ಮುಂತಾದೆಡೆ ಕಿಲೊ ಒಂದರ 25 ರೂಪಾಯಿಯಂತೆ ನಾಳೆಯಿಂದ ವಿತರಿಸಲಾಗುವುದು ಎಂದು ಸಚಿವ ಕಡಕಂಪಳ್ಳಿ ಸುರೇಂದ್ರನ್ ತಿಳಿಸಿದ್ದಾರೆ.
ಬಳಕೆದಾರರ ಒಕ್ಕೊಟದ ನೇತೃತ್ವದಲ್ಲಿ ಪಶ್ಚಿಮಬಂಗಾಳದಿಂದ 800 ಮೆಟ್ರಿಕ್ ಟನ್ ಸುವರ್ಣ ಅಕ್ಕಿ ತರಿಸಲಾಗಿದೆ. ಮಾರ್ಚ್ 10ರೊಳಗೆ ಇನ್ನು 1700 ಮೆಟ್ರಿಕ್ ಟನ್ ಅಕ್ಕಿ ಕೇರಳಕ್ಕೆ ಬರಲಿದೆ. ಇದರೊಂದಿಗೆ ಸಾರ್ವಜನಿಕ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆಯನ್ನು ನಿಯಂತ್ರಿಸಲು ಸಾಧ್ಯವೆಂದು ನಿರೀಕ್ಷಿಸಲಾಗಿದೆ.
ಇನ್ನೂ ಹೆಚ್ಚಿನ ಅಕ್ಕಿಯ ಅಗತ್ಯ ಬಿದ್ದರೆ ಅದಕ್ಕೂ ವ್ಯವಸ್ಥೆ ಮಾಡಲಾಗುವುದು. ಸೋಮವಾರ ಸಂಜೆ ಏಳು ಗಂಟೆಗೆ ಯೋಜನೆಯ ರಾಜ್ಯಮಟ್ಟದ ಉದ್ಘಾಟನೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರ್ವಹಿಸಲಿದ್ದಾರೆ. ತಿರುವನಂತಪುರಂ ಕರಕ್ಕುಳಂ ಸರ್ವಿಸ್ ಸಹಕಾರಿ ಬ್ಯಾಂಕ್‌ನ ಸಹಯೋಗದಲ್ಲಿ ಎಣಿಕ್ಕರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
27 ರೂಪಾಯಿ ಅಕ್ಕಿಯನ್ನು ಸಹಕಾರಿ ಸಂಘಗಳು 2 ರೂಪಾಯಿ ನಷ್ಟದಲ್ಲಿ 25 ರೂಪಾಯಿಗೆ ಮಾರಲಿವೆ. ಆರಂಭದಲ್ಲಿ ಒಂದು ಕುಟುಂಬಕ್ಕೆ ವಾರಕ್ಕೆ ಐದು ಕೆಜಿ ಅಕ್ಕಿ, ನಂತರದ ವಾರಗಳಲ್ಲಿ ಹತ್ತು ಕೆಜಿ ಅಕ್ಕಿ ವಿತರಿಸಲಾಗುವುದು. ಕಾರ್ಯಕ್ರಮ ಹೆಚ್ಚಿನ ಅವಧಿಗೆ ಅಗತ್ಯವಾದರೆ ಮುಂದುವರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆಂದು ವರದಿಯಾಗಿದೆ.