ಕಸ್ಟಡಿ ಸಾವು,ಪೊಲೀಸ್ ಠಾಣೆಗೆ ಬೆಂಕಿ

ಆರಾ(ಬಿಹಾರ),ಮಾ.5: ಭೋಜಪುರ ಜಿಲ್ಲೆಯ ಬಾರಹರಾ ಎಂಬಲ್ಲಿ 45ರ ಹರೆಯದ ವ್ಯಕ್ತಿಯೋರ್ವ ಪೊಲೀಸ್ ಕಸ್ಟಡಿಯಲ್ಲಿ ನಿಗೂಢ ಸಾವನ್ನಪ್ಪಿದ್ದು, ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಪ್ರತಿಭಟನೆ ನಡೆಸಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದಾರೆ.
ಬಾರಹರಾ ಗ್ರಾಮದ ನಿವಾಸಿ ರಾಮ ಸಜ್ಜನ ಸತ್ವಾ ಎಂಬಾತ ಶನಿವಾರ ಪೊಲೀಸರು ಥಳಿಸಿದ ಬಳಿಕ ಸಾವನ್ನಪ್ಪಿದ್ದ. ಠಾಣೆಯ ಹೊರಗೆ ಸೇರಿದ್ದ ಉದ್ರಿಕ್ತ ಜನರು ಕಲ್ಲುತೂರಾಟ ನಡೆಸಿದ್ದು ಹಲವಾರು ಪೊಲೀಸರು ಗಾಯಗೊಂಡಿದ್ದಾರೆ.
ಪ್ರತಿಭಟನಾ ಕಾರರು ಠಾಣೆಯೊಳಗೆ ನುಗ್ಗಿ ಬೆಂಕಿ ಹಚ್ಚಿದ್ದು, ಭಾಗಶಃ ಸುಟ್ಟುಹೋಗಿದೆ ಎಂದು ಜಿಲ್ಲಾಧಿಕಾರಿ ಬೀರೇಂದ್ರ ಪ್ರಸಾದ ಯಾದವ ತಿಳಿಸಿದರು.ಠಾಣೆಯಲ್ಲಿನ ಪೀಠೋಪಕರಣಗಳು, ದಾಖಲೆಗಳು,ಹೊರಗಡೆ ನಿಲ್ಲಿಸಿದ್ದ ಹಲವಾರು ವಾಹನಗಳಿಗೂ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದು,ಅಗ್ನಿಶಾಮಕ ದಳವು ಬೆಂಕಿಯನ್ನು ನಿಯಂತ್ರಿಸಿದೆ ಎಂದರು.
ಸತ್ವಾ ತಲೆಗುಂಟಾಗಿದ್ದ ತೀವ್ರ ಗಾಯಗಳಿಂದ ಮೃತಪಟ್ಟಿದ್ದಾನೆ ಎಂದು ವೈದ್ಯಕೀಯ ವರದಿಯು ತಿಳಿಸಿದೆ.ತನ್ನ ತಂದೆ ಪಾನಮತ್ತನಾಗಿ ಮನೆಗೆ ಬರುತ್ತಿದ್ದು, ತನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಸತ್ವಾನ ಪುತ್ರಿ ದೂರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಶನಿವಾರ ಆತನನ್ನು ವಶಕ್ಕೆ ತೆಗೆದುಕೊಂಡಿದ್ದರು.
ವೈದ್ಯಕೀಯ ತಪಾಸಣೆಗಾಗಿ ಸರಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಸತ್ವಾ ಜೀಪಿನಿಂದ ಹೊರಕ್ಕೆ ಹಾರಿದ್ದು, ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ ಎಂದು ಪೊಲೀಸರು ಸಮಜಾಯಿಷಿ ನೀಡಿದ್ದಾರೆ.







