ಪ್ರಾಸ್ಟೇಟ್ ಕ್ಯಾನ್ಸರ್ ಔಷಧಿಗೆ ಪೇಟೆಂಟ್ ನಿರಾಕರಣೆಗೆ ಕಾರಣ ಕೇಳಿದ ಹೈಕೋರ್ಟ್

ಹೊಸದಿಲ್ಲಿ,ಮಾ.5: ತನ್ನ ಪ್ರಾಸ್ಟೇಟ್ ಕ್ಯಾನ್ಸರ್ ಔಷಧಿಗೆ ಪೇಟೆಂಟ್ ಕೋರಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಪ್ರತಿನಿಧಿಗಳು ಸಲ್ಲಿಸಿದ್ದ ಅರ್ಜಿಯನ್ನು ಭಾರತದ ಪೇಟೆಂಟ್ ಕಚೇರಿಯು ಯಾವ ಆಧಾರದಲ್ಲಿ ತಿರಸ್ಕರಿಸಿದೆ ಎನ್ನುವುದನ್ನು ವಿವರಿಸುವಂತೆ ಕೇಳಿ ದಿಲ್ಲಿ ಉಚ್ಚ ನ್ಯಾಯಾಲಯವು ಕೇಂದ್ರಕ್ಕೆ ನೋಟಿಸ್ ಹೊರಡಿಸಿದೆ. ಮೇ.2ರೊಳಗೆ ಉತ್ತರ ಸಲ್ಲಿಸುವಂತೆ ಅದು ನಿರ್ದೇಶ ನೀಡಿದೆ.
ಪೇಟೆಂಟ್ ಕಚೇರಿಯ ಅಧಿಕಾರಿ ತನ್ನ ಆದೇಶವನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ? ಯಾವ ಆಧಾರದ ಮೇಲೆ ಅವರು ಆದೇಶವನ್ನು ಹೊರಡಿಸಿದ್ದರು ಎಂದು ನ್ಯಾ.ಸಂಜೀವ ಸಚದೇವ ಅವರು ಪ್ರಶ್ನಿಸಿದರು.
ಪ್ರಾಸ್ಟೇಟ್ ಕ್ಯಾನ್ಸರ್‌ನ ಚಿಕಿತ್ಸೆಯಲ್ಲಿ ಬಳಸಲಾಗುವ ಎಕ್ಸಟ್ಯಾಂಡಿ ಔಷಧಿಯನ್ನು ಆವಿಷ್ಕರಿಸಿರುವ ಕ್ಯಾಲಿಫೋರ್ನಿಯಾ ವಿವಿಯು 2007ರಿಂದ ವಿಶ್ವಾದ್ಯಂತ 50 ದೇಶಗಳ ವ್ಯಾಪ್ತಿಯಲ್ಲಿ ತನ್ನ ಆವಿಷ್ಕಾರಕ್ಕೆ ಪೇಟೆಂಟ್ ಪಡೆದುಕೊಂಡಿರುವುದಾಗಿ ತಿಳಿಸಿದೆ.
ಎಕ್ಸಟ್ಯಾಂಡಿಯನ್ನು ಭಾರತದಲ್ಲಿ ಮಾರಾಟ ಮಾಡಲು ಅನುಮತಿ ಲಭಿಸಿದೆ ಯಾದರೂ ಯಾವುದೇ ಹೊಸತನವಿಲ್ಲ ಎಂಬ ನೆಲೆಯಲ್ಲಿ ತನ್ನ ಪೇಟೆಂಟ್ ಅರ್ಜಿಯನ್ನು ತಿರಸ್ಕರಿಸಲಾಗಿದೆ ಮತ್ತು ಯಾವ ಆಧಾರದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನುವುದನ್ನು ಪೇಟೆಂಟ್ ಕಚೇರಿಯು ತನ್ನ ಆದೇಶದಲ್ಲಿ ಉಲ್ಲೇಖಿಸಿಲ್ಲ ಎಂದು ವಿವಿಯು ವಾದಿಸಿತ್ತು.
ಅಮೆರಿಕದ ಹೊರಗೆ ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಔಷಧಿಯನ್ನು ಮಾರಾಟ ಮಾಡುವ ಹಕ್ಕನ್ನು ಹೊಂದಿರುವ ಜಪಾನಿನ ಆಸ್ಟೆಲ್ಲಸ್ ಫಾರ್ಮಾ ಅದನ್ನು ಭಾರತದಲ್ಲಿ 112 ಕ್ಯಾಪ್ಸೂಲ್‌ಗಳ ಒಂದು ಪ್ಯಾಕ್‌ಗೆ 3.35 ಲ.ರೂ.ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಇದು ಒಂದು ತಿಂಗಳ ಔಷಧಿ ಮಾತ್ರ!
ಪೇಟೆಂಟ್ ಕೋರಿ ತಾನು 2007ರಲ್ಲಿ ಅರ್ಜಿಯನ್ನು ಸಲ್ಲಿಸಿದ್ದು, ಕೆಲವು ಪ್ರತಿಸ್ಪರ್ಧಿಗಳು ವಿರೋಧಿಸುತ್ತಿದ್ದಾರೆ ಎಂಬ ಏಕೈಕ ಕಾರಣದಿಂದ ಕಳೆದ ವರ್ಷದ ನವಂಬರ್‌ನಲ್ಲಿ ತನ್ನ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಹಿರಿಯ ವಕೀಲ ಪಿ.ಚಿದಂಬರಂ ಅವರು ಪ್ರತಿನಿಧಿಸಿರುವ ವಿವಿಯು ವಾದಿಸಿತ್ತು.







