ಪ್ರಾಣದ ಹಂಗು ತೊರೆದು ಹೋರಾಡಿದ ಮಂಝೂರ್ ಅಹ್ಮದ್

ತ್ರಾಲ್,ಮಾ.5: ತ್ರಾಲ್‌ನಲ್ಲಿ ಉಗ್ರರನ್ನು ಸದೆಬಡಿಯುವ ವೇಳೆ ಹುತಾತ್ಮರಾದ ಜಮ್ಮುಕಾಶ್ಮೀರ ಪೊಲೀಸ್ ಪಡೆಯ ಕಾನ್ಸ್‌ಸ್ಟೇಬಲ್ 33 ವರ್ಷ ವಯಸ್ಸಿನ ಮಂಝೂರ್ ಅಹ್ಮದ್ ನಾಯ್ಕ್, ಶೀಘ್ರದಲ್ಲೇ ತಂದೆಯಾಗಲಿದ್ದರು.ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಮನೆಯೊಂದರಲ್ಲಿ ಅವಿತಿದ್ದ ಉಗ್ರರನ್ನು ಹೊರದಬ್ಬುವ ಮೊದಲನೆ ಪ್ರಯತ್ನದಲ್ಲಿ ಗುಂಡಿನ ಸುರಿಮಳೆಯ ನಡುವೆಯೂ ಅಚ್ಚರಿಕರವಾದ ರೀತಿಯಲ್ಲಿ ಪಾರಾದ ಅವರು, ಎರಡನೆ ಪ್ರಯತ್ನದಲ್ಲಿ ಪ್ರಾಣ ಕಳೆದುಕೊಂಡರು.
ಅವಿತಿದ್ದ ಉಗ್ರರ ಮೇಲೆ ದಾಳಿ ನಡೆಸಲು ಸಜ್ಜಾದ ಪೊಲೀಸ್,ಸೇನೆ ಹಾಗೂ ಸಿಆರ್‌ಪಿಎಫ್ ತಂಡದಲ್ಲಿ ಮಂಝೂರ್ ಮುಂಚೂಣಿಯಲ್ಲಿದ್ದರು. ಭಾರೀ ಶಸ್ತ್ರಾಸ್ತ್ರಗಳಿಂದ ಸಜ್ಜಿತರಾಗಿದ್ದ ಉಗ್ರರನ್ನು ಮಟ್ಟಹಾಕಲು ಇಡೀ ಮನೆಯನ್ನೇ ಸ್ಫೋಟಕಗಳಿಂದ ಸ್ಫೋಟಿಸಿ ಕೆಡವಲು ಸೇನಾಧಿಕಾರಿಗಳು ನಿರ್ಧರಿಸಿದರು.
ಸ್ಫೋಟಕಗಳನ್ನು ಮನೆಯ ಸುತ್ತಲೂ ಇರಿಸುವ ಕೆಲಸವನ್ನು ನಿರ್ವಹಿಸಲು ಮಂಝೂರ್ ತಾನಾಗಿಯೇ ಮುಂದೆಬಂದರು. ಇದೊಂದು ಅಪಾಯಕಾರಿಯಾದ ಕೆಲಸವಾಗಿದ್ದು, ಇದರಲ್ಲಿ ಸಾವನ್ನಪ್ಪುವ ಅಪಾಯವೂ ಇದೆ ಹಾಗೂ ಇಂತಹ ಅಪಾಯವನ್ನು ತೆಗೆದುಕೊಳ್ಳಬಾರದೆಂದು ಸೇನಾಧಿಕಾರಿಗಳು ಎಚ್ಚರಿಕೆ ನೀಡಿದರು. ಧೃತಿಗೆಡದ ಮಂಝೂರ್ ‘ಕೋಯಿ ಬಾತ್ ನಹೀ’ (ಚಿಂತಿಸಬೇಡಿ) ಎನ್ನುತ್ತಾ ಮನೆಯ ಸುತ್ತ ಸ್ಫೋಟಕಗಳನ್ನು ಇರಿಸುವ ಹೊಣೆಯನ್ನು ವಹಿಸಿಕೊಂಡರು.
ಇತ್ತ ಮನೆಯೊಳಗಿಂದ ಉಗ್ರರು ಎಡೆಬಿಡದೆ ಗುಂಡುಹಾರಿಸುತ್ತಿದ್ದರೂ, ಹಿಮ್ಮೆಟ್ಟದ ಮಂಝೂರ್ ಕತ್ತಲಮರೆಯಲ್ಲಿ ತೆವಳುತ್ತಾ ಸಾಗಿಬಂದು ಮನೆಯ ಸುತ್ತಲೂ ಸ್ಫೋಟಕಗಳನ್ನು ಇರಿಸಿದರೆಂದು ಹಿರಿಯ ಸೇನಾಧಿಕಾರಿಯೊಬ್ಬರು ಸ್ಮರಿಸಿಕೊಂಡಿದ್ದಾರೆ. ಉಗ್ರರು ಎಕೆ47 ರೈಫಲ್‌ಗಳಿಂದ ಗುಂಡುಹಾರಿಸುತ್ತಿದ್ದರೂ, ಯಶಸ್ವಿಯಾಗಿ ಪಾರಾಗಿದ್ದರು.
ಆದರೆ ಅವರು ಇರಿಸಿದ್ದ ಸ್ಫೋಟಕವು ಮನೆಯ ಒಂದು ಭಾಗವನ್ನಷ್ಟೇ ಉರುಳಿಸಲು ಸಫಲವಾಯಿತು. ಆನಂತರ ಉಗ್ರರು ಮತ್ತು ಭದ್ರತಾ ಪಡೆಗಳ ಕಾಳಗ ಸುಮಾರು ರಾತ್ರಿ 2 ಗಂಟೆಯವರೆಗೂ ಮುಂದುವರಿಯಿತು. ಆ ಬಳಿಕ ಮನೆಯೊಳಗಿಂದ ಗುಂಡೆಸೆತ ಒಮ್ಮಿಂದೊಮ್ಮೆಗೆ ನಿಂತಿತು. ಆನಂತರ ಭದ್ರತಾಪಡೆಗಳು ಇನ್ನೂ ಎರಡು ತಾಸುಗಳ ಕಾಲ ಪ್ರತಿಕ್ರಿಯೆಗಾಗಿ ಕಾದುಕುಳಿತಿದ್ದವು. ಬಳಿಕ ಹಠಾತ್ತನೆ ಮನೆಯೊಳಗಿಂದ ಹಾರಿಬಂದ ಗುಂಡೊಂದು ಸೇನಾ ಮೇಜರ್ ಒಬ್ಬರನ್ನು ಗಂಭೀರವಾಗಿ ಗಾಯಗೊಳಿಸಿತು. ಮಂಝೂರ್ ಅಹ್ಮದ್ ಮತ್ತೊಮ್ಮೆ ಮನೆಯ ಸಮೀಪಕ್ಕೆ ತೆರಳಿ ಸ್ಫೋಟಕಗಳನ್ನು ಇರಿಸುವ ಸಾಹಸಕ್ಕೆ ಮುಂದಾದರು. ಅವರು ಮನೆಯ ಸಮೀಪಕ್ಕೆ ತೆವಳುತ್ತಾ ಸಾಗುತ್ತಿದ್ದಂತೆಯೇ ಅವರೆಡೆಗೆ ಉಗ್ರರು ಗುಂಡುಗಳ ಸುರಿಮಳೆಗೈದರು. ತನಗಾದ ಗಂಭೀರಗಾಯಗಳನ್ನು ಲೆಕ್ಕಿಸದೆಯೇ ಮಂಝೂರ್, ಮನೆಯ ಉಳಿದ ಭಾಗದ ಬಳಿ ಸ್ಫೋಟಕಗಳನ್ನು ಇರಿಸಿ, ಕೊನೆಯುಸಿರೆಳೆದರು.
ನಾಲ್ಕು ವರ್ಷದ ಪುತ್ರ, ಗರ್ಭಿಣಿ ಪತ್ನಿ ಹಾಗೂ ಇಬ್ಬರು ನಿರುದ್ಯೋಗಿ ಸಹೋದರರನ್ನು ಅಗಲಿರುವ ನಾಯ್ಕ್, ಅವರ ಕುಟುಂಬದ ಏಕೈಕ ಜೀವನಾಧಾರವಾಗಿದ್ದಾರೆ.
ಹೆರಿಗೆಯ ನಿರೀಕ್ಷೆಯಲ್ಲಿರುವ ತನ್ನ ಪತ್ನಿಯೊಂದಿಗಿರಲು ನಾಯ್ಕ್ ರಜೆಯಲ್ಲಿ ತೆರಳಲಿದ್ದರು. ಆದರೆ ತ್ರಾಲ್‌ನಲ್ಲಿ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು.
ನಾಯ್ಕ್‌ರಂತಹ ದಿಟ್ಟ ಸಿಬ್ಬಂದಿಯನ್ನು ಕಳೆದುಕೊಂಡಿರುವುದು ಅತ್ಯಂತ ವಿಷಾದಕರವಾಗಿದೆ.ತನ್ನ ಕರ್ತವ್ಯ ಹಾಗೂ ತಾಯ್ನಡಿಗೆ ಅವರು ತೋರಿದ ಪ್ರೀತಿ ಎಂದೂ ವ್ಯರ್ಥವಾಗದು. ಈ ಕಾನ್ಸ್‌ಸ್ಟೇಬಲ್ ಮಾಡಿರುವ ಪರಮೋನ್ನತ ತ್ಯಾಗವು ಜಮ್ಮುಕಾಶ್ಮೀರದ ಪೊಲೀಸ್ ಪಡೆಗೆ ನೈತಿಕ ಸ್ಥೈರ್ಯವನ್ನು ತುಂಬಲಿದೆಯೆಂದು ಜಮ್ಮುಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ಎಸ್.ಪಿ.ವೈದ್ ಹೇಳಿದ್ದಾರೆ.