ಪತಿ ತನಗಾಗಿ ಖರೀದಿಸಿದ್ದ ಆಸ್ತಿಯ ಮೇಲೆ ವಿಧವೆಗೆ ಹಕ್ಕು ಇದೆ : ನ್ಯಾಯಾಲಯ

ಹೊಸದಿಲ್ಲಿ,ಮಾ.5: ಪತಿಯು ತನ್ನ ಹೆಸರಿನಲ್ಲಿ ಖರೀದಿಸಿರುವ ಆಸ್ತಿಯನ್ನು ತನಗೆ ಇಷ್ಟ ಬಂದಂತೆ ಅನುಭವಿಸಲು ವಿಧವೆಗೆ ಹಕ್ಕು ಇದೆ ಮತ್ತು ಆಕೆಯ ಪತಿ ಅಥವಾ ಅಳಿಯ ಅದರ ಮೇಲೆ ಹಕ್ಕು ಸಾಧಿಸುವಂತಿಲ್ಲ ಎಂದು ದಿಲ್ಲಿಯ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಎತ್ತಿ ಹಿಡಿದಿದೆ.
ಮನೆಯ ಒಂದು ಭಾಗವನ್ನು ತೆರವುಗೊಳಿಸಲು ತನ್ನ ಪುತ್ರಿ ಮತ್ತು ಅಳಿಯನ ನಿರಾಕರಣೆ ಹಾಗು ಆಸ್ತಿ ಮೇಲಿನ ತನ್ನ ಹಕ್ಕನ್ನು ಪ್ರಶ್ನಿಸುತ್ತಿರುವುದರ ವಿರುದ್ದ ವಾಯುವ್ಯ ದಿಲ್ಲಿಯ ಶಾಸ್ತ್ರಿ ನಗರದ ನಿವಾಸಿ ಲಾಜವಂತಿ ದೇವಿ(65) ನ್ಯಾಯಾಲಯದ ಮೆಟ್ಟಿಲ ನ್ನೇರಿದ್ದು, ಆಕೆಯ ಪರವಾಗಿ ತೀರ್ಪು ಹೊರಬಿದ್ದಿದೆ.
ಲಾಜವಂತಿ 1985ರಲ್ಲಿ ತನ್ನ ಮನೆಯ ಒಂದು ಭಾಗವನ್ನು ಪುತ್ರಿ ಮತ್ತು ಅಳಿಯನ ವಾಸಕ್ಕಾಗಿ ನೀಡಿದ್ದರು, ಆದರೆ ಬಳಿಕ ತೆರುವುಗೊಳಿಸುವಂತೆ ಸೂಚಿಸಿದ್ದರೂ ಅವರು ನಿರಾಕರಿಸಿದ್ದರು. ಇದಕ್ಕಾಗಿ ವಿಧವೆ ಮಹಿಳೆ ನ್ಯಾಯಾಲಯವನ್ನು ಹತ್ತುವಂತೆ ಮಾಡಿದ್ದಕ್ಕೆ ನ್ಯಾ.ಕಾಮಿನಿ ಲವು ಅವರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಲಾಜವಂತಿಯ ಪತಿ ತನ್ನ ನಿಧನಾನಂತರ ಆಕೆಗೆ ಸುಭದ್ರ ಬದುಕನು ಒದಗಿಸುವ ಉದ್ದೇಶದಿಂದ 1965ರಲ್ಲಿ ಆಕೆಯ ಹೆಸರಿನಲ್ಲಿ ಆಸ್ತಿಯನ್ನು ಖರೀದಿಸಿದ್ದರು. ಆಕೆಯ ಪುತ್ರಿ ಮತ್ತು ಅಳಿಯ ಆಕೆಯ ಅನುಮತಿಯ ಮೇರೆಗೆ ಮಾತ್ರವೇ ಮನೆಯ ಒಂದು ಭಾಗವನ್ನು ತಮ್ಮ ವಶದಲ್ಲಿ ಹೊಂದಿದ್ದರು ಮತ್ತು ಅವರು ಆಕೆಯ ಹಕ್ಕು ಕಿತ್ತುಕೊಳ್ಳಲು ಅವಕಾಶ ನೀಡುವಂತಿಲ್ಲ ಎಂದು ನ್ಯಾಯಾಲಯವು ಹೇಳಿತು.
ಮನೆಯನ್ನು ಆರು ತಿಂಗಳುಗಳಲ್ಲಿ ತೆರವುಗೊಳಿಸುವಂತೆ ದಂಪತಿಗೆ ನಿರ್ದೇಶ ನೀಡಿದ ನ್ಯಾಯಾಲಯವು, 2014ರಲ್ಲಿ ಮೊಕದ್ದಮೆ ದಾಖಲಾದಾಗಿನಿಂದ ತೀರ್ಪಿನ ಬಳಿಕ ಮನೆಯನ್ನು ತೆರವುಗೊಳಿಸುವವರೆಗೆ ಪ್ರತಿ ತಿಂಗಳು 10,000 ರೂ.ನಂತೆ ಮೊತ್ತವನ್ನು ಬಡ್ಡಿಸಹಿತವಾಗಿ ಲಾಜವಂತಿಗೆ ಪಾವತಿಸುವಂತೆ ಆದೇಶಿಸಿತು.
ಲಾಜವಂತಿಯ ಪತಿ ತನ್ನ ಸ್ವಂತ ಹಣದಲ್ಲಿ ಆಸ್ತಿಯನ್ನು ಖರೀದಿಸಿದ್ದರಿಂದ ಆಕೆಗೆ ಯಾವುದೇ ಅದರ ಮೇಲೆ ಹಕ್ಕು ಇಲ್ಲ ಮತ್ತು ಆಕೆ ಮನೆಯ ಮಾಲಿಕಳಲ್ಲವಾದ್ದರಿಂದ ಮೊಕದ್ದಮೆಯನ್ನು ದಾಖಲಿಸುವ ಅಧಿಕಾರ ಹೊಂದಿಲ್ಲ ಎಂದು ಪುತ್ರಿ ಮತ್ತು ಅಳಿಯ ವಾದಿಸಿದ್ದರು.







