ಬದಲಾವಣೆಯ ನಿರೀಕ್ಷೆಯಲ್ಲಿ ವಾರಣಾಸಿಯ ಮುಸ್ಲಿಂ ನೇಕಾರರು

ವಾರಣಾಸಿ, ಮಾ.5: ವಿಶ್ವ ವಿಖ್ಯಾತ ನೇಕಾರಿಕಾ ಕೇಂದ್ರವಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕ್ಷೇತ್ರ ವಾರಣಾಸಿಯಲ್ಲಿ ಜನರು ಬದಲಾವಣೆ ಬಯಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಮುಸ್ಲಿಂ ನೇಕಾರರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಬಹಿರಂಗವಾಗಿ ಟೀಕಿಸುತ್ತಿದ್ದಾರೆ.
ನೋಟ್ ರದ್ದತಿಯ ಕ್ರಮ ಕೈಗೊಂಡ ಬಳಿಕ ಬನಾರಸ್ ಸೀರೆಗಳು ತನ್ನ ಕಾಂತಿಯನ್ನು ಕಳೆದುಕೊಂಡಿದೆ. ಮುಸ್ಲಿಂ ನೇಕಾರರು ಬಿಜೆಪಿಯ ಧೋರಣೆಯ ಬಗ್ಗೆ ಅತೃಪ್ತಿಗೊಂಡಿದ್ದಾರೆ. ಸಮುದಾಯವನ್ನು ಒಡೆಯುವ ಕೇಸರಿ ಪಕ್ಷದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೇಕಾರರ ಬಗ್ಗೆ ಹೊಂದಿರುವ ನಿಲುವಿನ ಬಗ್ಗೆ ಕೈಮಗ್ಗದ ಸೀರೆಗಳ ವರ್ತಕ ಅಬ್ದುಲ್ ರವೂಫ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಲ್ಲಿ ಇರುವ ಪ್ರಸಿದ್ಧ ರೇಷ್ಮೆ ನೇಕಾರರ ಪೈಕಿ ಬಹುತೇಕ ಮಂದಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು.
‘‘ಮೋದಿ ವಾರಣಾಸಿಯಿಂದ ಜಯಿಸಿ ಪ್ರಧಾನ ಮಂತ್ರಿಯಾಗಿದ್ದರೂ, ಅವರ ವಾರಣಾಸಿ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಲಿಲ್ಲ. ಬಿಜೆಪಿಯಲ್ಲಿ ನಮಗೆ ವಿಶ್ವಾಸವಿಲ್ಲ’’ ಎಂದು ಮದನಾಪುರದ ಎಪ್ಪತ್ತರ ಹರೆಯದ ವ್ಯಾಪಾರಿ ರಫೀಕ್ ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ.
ಮೋದಿ ಕ್ಷೇತ್ರದಲ್ಲಿ ಶೇ 20ರಷ್ಟು ಮುಸ್ಲಿಮರು ಇದ್ದಾರೆ. ಅವರಲ್ಲಿ ಬಹುತೇಕ ಮಂದಿ ಮುಂದಿನ ಚುನವಣೆಯಲ್ಲಿ ಸಮಾಜವಾದಿ-ಕಾಂಗ್ರೆಸ್ ಮೈತಿಕೂಟದ ಮೇಲೆ ವಿಶ್ವಾಸವಿರಿಸಿದ್ದಾರೆ. ಮಾ.8ರಂದು ಇಲ್ಲಿ ಚುನಾವಣೆ ನಡೆಯಲಿದೆ.
2012ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧಿಸಿತ್ತು. ಇದರಿಂದಾಗಿ ಮತ ವಿಭಜನೆಗೊಂಡಿತ್ತು. ಇದರ ಪರಿಣಾಮವಾಗಿ ಬಿಜೆಪಿಯು ಮೂರು ಕ್ಷೇತ್ರಗಳಲ್ಲೂ ಜಯ ಗಳಿಸಿತ್ತು ಎಂದು ರಫೀಕ್ ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ.
ನರೇಂದ್ರ ಮೋದಿ ಶನಿವಾರ ರೋಡ್ ಶೋ ನಡೆಸಿದ್ಧಾರೆ. ಮುಸ್ಲಿಂ ಕುಟುಂಬ ಹೆಚ್ಚಾಗಿ ನೆಲೆಸಿರುವ ಕಡೆಗಳಲ್ಲಿ ಮುಸ್ಲಿಂ ಮತದಾರರನ್ನು ತನ್ನತ್ತ ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಆದರೆ ಮೋದಿಯ ಪ್ರಯತ್ನ ಯಾವುದೇ ಪರಿಣಾಮ ಬೀರದು ಎಂದು ಝುಬೈರ್ ಅಹ್ಮದ್ ಹೇಳುತ್ತಾರೆ.
‘‘ಮುಸ್ಲಿಂ ಜನಸಂಖ್ಯೆ ಶೇ 20ರಷ್ಟು ಇದ್ದರೂ ಯಾವನೇ ಒಬ್ಬ ಮುಸ್ಲಿಂ ಅಭ್ಯರ್ಥಿಗೆ ಬಿಜೆಪಿ ವಿಧಾನಸಭೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿಲ್ಲ. ಇಲ್ಲಿರುವ 403 ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದರಲ್ಲೂ ಬಿಜೆಪಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಈ ಕಾರಣದಿಂದಾಗಿ ಮುಸ್ಲಿಂ ಮತದಾರರು ಬಿಜೆಪಿಯನ್ನು ಯಾಕೆ ಬೆಂಬಲಿಸಬೇಕು? ಎಂದು ಅವರು ಪ್ರಶ್ನಿಸಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಾಗ ಮುಸ್ಲಿಂ ಮತದಾರರು ಅವರನ್ನು ಬೆಂಬಲಿಸಿದ್ದರು. ನನ್ಮ ಸ್ನೇಹಿತರು ಬಿಜೆಪಿ ಮತ ಚಲಾಯಿಸಿದ ವಿಚಾರವನ್ನು ಹಿಂದೂ ಸ್ನೇಹಿತರಲ್ಲಿ ಹೇಳಿದಾಗ ಅವರು ಈ ವಿಚಾರವನ್ನು ಒಪ್ಪಲಿಲ್ಲ. ಗೇಲಿ ಮಾಡಿದ್ದರು’’ ಎಂದು ರಫೀಕ್ ಅಹ್ಮದ್ ನೆನಪಿಸಿದರು.
ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಒಂದಾಗಿರುವ ಹಿನ್ನೆಲೆಯಲ್ಲಿ ವಾರಣಾಸಿಯ ಮೂರು ಕ್ಷೇತ್ರಗಳ ಪೈಕಿ ಎರಡರಲ್ಲಿ ಬಿಜೆಪಿ ಸೋಲುವುದು ಖಚಿತ ಎಂದು ಸ್ಥಳೀಯರು ಹೇಳಿದ್ದಾರೆ.







