ಕಾಗೋಡು ದ್ವೇಷ ರಾಜಕಾರಣಕ್ಕೆ ಬೇಸತ್ತು ಬಿಜೆಪಿಗೆ: ಕುಮಾರ್ ಬಂಗಾರಪ್ಪ
ಮಾ.9ರಂದು ಮಲ್ಲೇಶ್ವರಂ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸೇರ್ಪಡೆ

ಸೊರಬ, ಮಾ.5: ಸಚಿವ ಕಾಗೋಡು ತಿಮ್ಮಪ್ಪನವರ ದ್ವೇಷದ ರಾಜಕಾರಣದಿಂದ ಬೇಸತ್ತು ಸುದೀರ್ಘ ಕಾಲ ಕಾಂಗ್ರೆಸ್‌ನ ಪ್ರಾಮಾಣಿಕ ಕಾರ್ಯಕರ್ತನಾಗಿದ್ದ ನಾನು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪಹೇಳಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ರಾಷ್ಟ್ರೀಯ ಪಕ್ಷವೆಂದು ಸಂವಿಧಾನವೇ ಒಪ್ಪಿಕೊಂಡ ಮೇಲೆ ನಾನು ಒಪ್ಪಿಕೊಳ್ಳುವುದರಲ್ಲಿ ತಪ್ಪೇನಿದೆ’ ಎಂದು ಬಿಜೆಪಿಗೆ ಸೇರುವ ಅಭಿಲಾಷೆಯನ್ನು ಸಮರ್ಥಿಸಿಕೊಂಡರು.
ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರನ್ನು ಕಡೆಗಣಿಸಿ ವಿರೋಧಪಕ್ಷವಾದ ಜೆಡಿಎಸ್‌ನವರನ್ನು ಬಗರ್ ಹುಕುಂ ಹಾಗೂ ಇನ್ನಿತರ ಸಮಿತಿಗಳಿಗೆ ನೇಮಿಸಿರುವುದಲ್ಲದೆ ಸಚಿವ ಕಾಗೋಡು ತಿಮ್ಮಪ್ಪನವರ ದ್ವೇಷದ ರಾಜಕಾರಣದಿಂದ ಬೇಸತ್ತು ಸುದೀರ್ಘಕಾಲ ಕಾಂಗ್ರೆಸ್‌ನ ಪ್ರಾಮಾಣಿಕ ಕಾರ್ಯಕರ್ತನಾಗಿದ್ದ ತನು ಹಾಗೂ ತನ್ನ ಬೆಂಬಲಿಗರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇವೆ ಎಂದರು.
ಕೇಂದ್ರ ಸರಕಾರದ ಜನಪ್ರಿಯ ಕಾರ್ಯಕ್ರಮಗಳು ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಚಿಂತನೆಗಳನ್ನು ಮೆಚ್ಚಿ ಬೆಂಬಲಿಗರೊಂದಿಗೆ ಚರ್ಚಿಸಿ ಅವರ ಇಚ್ಛೆಯಂತೆ ಮಾ.9ರಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಹಿರಿಯ
ುುಖಂಡರ ಸಮ್ಮುಖದಲ್ಲಿ ಬಿಜೆಪಿಗೆ ಸೇರುವುದಾಗಿ ತಿಳಿಸಿದರು. ಕಾಗೋಡು ತಿಮ್ಮಪ್ಪನವರು ಮೊದಲಿನಿಂದಲೂ ತಂದೆಯವರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಕಾಂಗ್ರೆಸ್‌ನಿಂದ ಬೆಂಬಲ ನೀಡುವುದಾಗಿ ಹಿಂದೊಮ್ಮೆ ಬಂಗಾರಪ್ಪನವರನ್ನು ಶಿಕಾರಿಪುರದಿಂದ ಸ್ಪರ್ಧಿಸುವಂತೆ ಹುರಿದುಂಬಿಸಿ ಅವರನ್ನು ಸೋಲಿಸುವ ಮೂಲಕ ಠೇವಣಿ ಸಿಗದ ಹಾಗೇ ಮಾಡಿದ್ದರು ಎಂದು ಕಾಂಗ್ರೆಸ್‌ನ್ನು ಟೀಕಿಸಿದರು.
ಕುಮಾರ್ ಹೆಸರಿನ ಮುಂದೆ ಬಂಗಾರಪ್ಪಎಂಬ ನಂಟನ್ನು ಪ್ರಶ್ನಿಸುವ ಕಾಗೋಡು ತಿಮ್ಮಪ್ಪ ಅವರು, ಕಾಗೋಡು ಚಳವಳಿಯ ರೂವಾರಿಗಳಲ್ಲಿ ಒಬ್ಬರಾದ ಅವರ ತಂದೆ ಬೀರನಾಯಕರ ಹೆಸರನ್ನು ಇಟ್ಟಕೊಳ್ಳದೆ ಕಾಗೋಡು ಚಳವಳಿಯ ರೂವಾರಿಗಳು ಎಂಬಂತೆ ಹೆಸರಿಗೆ ‘ಕಾಗೋಡು’ ಎಂದು ಸೇರಿಸಿಕೊಂಡಿರುವುದರ ಔಚಿತ್ಯವೇನು ಎಂದ ಕುಮಾರ್ ಬಂಗಾರಪ್ಪ, ಕಾಗೋಡು ಚಳವಳಿ ಸಂದರ್ಭದಲ್ಲಿ ಪ್ರಭುದ್ಧಮಾನಕ್ಕೆ ಬಂದಿರಲಿಲ್ಲ ಎಂದು ವ್ಯಂಗ್ಯವಾಡಿದರು.
ಸ್ವತಂತ್ರ ಪೂರ್ವದಿಂದ ಅಸ್ತಿತ್ವದಲ್ಲಿರುವ ಅನೇಕ ದಶಕಗಳಕಾಲ ದೇಶವನ್ನಾಳಿದ ಕಾಂಗ್ರೆಸ್ ಕೇಂದ್ರದಲ್ಲಿ ಕೇವಲ 44 ಸ್ಥಾನಗಳನ್ನು ಪಡೆಯುವ ಮೂಲಕ ವಿರೋಧ ಪಕ್ಷದ ಅರ್ಹತೆಯನ್ನೂ ಕಳೆದುಕೊಂಡು ಹೀನಾಯ ಸ್ಥಿತಿಗೆ ತಲುಪಿದೆ. ರಾಜ್ಯದಲ್ಲಿ ಸುಭದ್ರವಾಗಿದ್ದ ಕಾಂಗ್ರೆಸ್ ಇತ್ತೀಚಿನ ದಿನಗಳಲ್ಲಿ ಹಿರಿಯ ನಾಯಕರಾದ ಎಸ್.ಎಂ. ಕೃಷ್ಣ, ಸಿ.ಕೆ. ಜಾಫರ್ ಶರೀಫ್, ಜನಾರ್ದನ ಪೂಜಾರಿ, ಎಚ್. ವಿಶ್ವನಾಥ್ ಸೇರಿದಂತೆ ಅನೇಕರನ್ನು ಕಡೆಗಣಿಸಿದೆ ಎಂದು ಆರೋಪಿಸಿದರು.
2018ರ ಪೂರ್ವದಲ್ಲಿಯೇ ವಿಧಾನ ಸಭಾ ಚುನಾವಣೆ ನಡೆಯಬಹುದು ಎಂದು ಭವಿಷ್ಯ ನುಡಿದ ಅವರು, ಬಜೆಟ್ ಮಂಡನೆಯ ನಂತರ ರಾಜ್ಯ ಸರಕಾರದ ಹಣೆಬರಹ ತಿಳಿಯಲಿದೆ ಎಂದು ಭವಿಷ್ಯ ನುಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ತಬಲಿ ಬಂಗಾರಪ್ಪ, ಎಂ.ಡಿ. ಉಮೇಶ್, ಮಂಜಪ್ಪ ಮಾಸ್ಟರ್, ಬುಳ್ಳಿ ವಿನಾಯಕಪ್ಪ, ಮಂಜುಳಮ್ಮ, ಹಸೀನಾ, ವೈ.ಜಿ. ಪುಟ್ಟಸ್ವಾಮಿ, ಶಬ್ಬಿರ್ ಅಹ್ಮದ್ ಕಿಲ್ಲೇದರ್ ಮತ್ತಿತರರು ಉಪಸ್ಥಿತರಿದ್ದರು.







