ಉತ್ತರ ಪ್ರದೇಶ ಚುನಾವಣೆ : ಮೂವರಲ್ಲಿ ಒಬ್ಬ ಅಭ್ಯರ್ಥಿ ಕ್ರಿಮಿನಲ್; ಶೇ.30ರಷ್ಟು ಕೋಟ್ಯಾಧೀಶರು..!

ಹೊಸದಿಲ್ಲಿ, ಮಾ.5: ಉತ್ತರ ಪ್ರದೇಶದ ವಿಧಾನಸಭೆಗೆ ಈ ಬಾರಿ ನಡೆಯುವ ಚುನಾವಣೆಯಲ್ಲಿ ಕಣದಲ್ಲಿರುವ ಪ್ರತೀ ಮೂವರು ಅಭ್ಯರ್ಥಿಗಳಲ್ಲಿ ಓರ್ವ ಕ್ರಿಮಿನಲ್ ಹಿನ್ನೆಲೆಯುಳ್ಳವರು ಹಾಗೂ ಶೇ.30ರಷ್ಟು ಮಂದಿ ಕೋಟ್ಯಾಧೀಶರು ಎಂಬುದು ಅಭ್ಯರ್ಥಿಗಳು ಸ್ವಯಂಪ್ರಮಾಣೀಕರಿಸಿದ ಹೇಳಿಕೆಯಲ್ಲಿ ತಿಳಿದು ಬಂದಿದೆ.
ಉತ್ತರ ಪ್ರದೇಶದಲ್ಲಿ ಏಳನೇ ಹಂತದ ಚುನಾವಣಾ ಪ್ರಕ್ರಿಯೆ ಮಾ. 8ಕ್ಕೆ ಅಂತ್ಯಗೊಳ್ಳಲಿದ್ದು ಚುನಾವಣಾ ಪ್ರಚಾರ ಕಾರ್ಯ ಭರದಿಂದ ಸಾಗಿದೆ. 4,823 ಅಭ್ಯರ್ಥಿಗಳು ಸಲ್ಲಿಸಿದ್ದ ಸ್ವಯಂ ಪ್ರಮಾಣ ಪತ್ರದ ವಿಶ್ಲೇಷಣೆ ಮಾಡಿರುವ ‘ ಪ್ರಜಾಪ್ರಭುತ್ವದ ಸುಧಾರಣೆಗಾಗಿ ಉತ್ತರಪ್ರದೇಶ ಚುನಾವಣೆ ವೀಕ್ಷಣಾ ಸಂಘಟನೆ ’ಯ ಪ್ರಕಾರ 859 ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿರುವುದಾಗಿ ತಿಳಿಸಿದ್ದಾರೆ.
ಅಲ್ಲದೆ ಇನ್ನುಳಿದ 704 ಮಂದಿಯ ವಿರುದ್ಧ ಗಂಭೀರರೂಪದ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಇದರಲ್ಲಿ 62 ಅಭ್ಯರ್ಥಿಗಳ ವಿರುದ್ಧ ಕೊಲೆ ಪ್ರಕರಣ, 148 ವಿರುದ್ಧ ಕೊಲೆ ಯತ್ನ ಪ್ರಕರಣ, 38 ಅಭ್ಯರ್ಥಿಗಳ ವಿರುದ್ಧ ಮಹಿಳೆಯರ ವಿರುದ್ಧ ಅಪರಾಧ ಯತ್ನ(ಇವರಲ್ಲಿ 10 ಮಂದಿಯ ವಿರುದ್ಧ ಅತ್ಯಾಚಾರ ಆರೋಪ), 34 ಮಂದಿಯ ವಿರುದ್ಧ ಅಪಹರಣ ಪ್ರಕರಣ, 22 ಅಭ್ಯರ್ಥಿಗಳ ವಿರುದ್ಧ ಕೋಮು ಹಿಂಸೆಗೆ ಪ್ರಚೋದನೆ ನೀಡಿದ ಆರೋಪ, 63 ಅಭ್ಯರ್ಥಿಗಳ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪಗಳಿವೆ.
ಅಸ್ಪಷ್ಟ ಮಾಹಿತಿಯ ಕಾರಣ 31ಮಂದಿಯ ವಿಶ್ಲೇಷಣೆ ಮಾಡಲಾಗಿಲ್ಲ. ಒಟ್ಟು 1,457 ಅಭ್ಯರ್ಥಿಗಳು ಕೋಟ್ಯಾಧಿಪತಿಗಳು. ಅಲ್ಲದೆ 3334 ಅಭ್ಯರ್ಥಿಳು 25ರಿಂದ 50ರ ಹರೆಯದವರು. 1440 ಅಭ್ಯರ್ಥಿಗಳು 51ರಿಂದ 80ರ ಹರೆಯದವರು. 7 ಅಭ್ಯರ್ಥಿಗಳು 80ಕ್ಕೂ ಹೆಚ್ಚು ವಯಸ್ಸಾದವರು. ಇಬ್ಬರು ಅಭ್ಯರ್ಥಿಗಳು ತಮ್ಮ ವಯಸ್ಸು 24ಕ್ಕಿಂತ ಕಡಿಮೆಯಿದೆ ಎಂದು ಘೋಷಿಸಿದ್ದಾರೆ. 445 ಮಹಿಳೆಯರು ಅಭ್ಯರ್ಥಿಗಳು ಈ ಬಾರಿ ಕಣದಲ್ಲಿದ್ಧಾರೆ.







