ಎಐಎಫ್‌ಎಫ್ ಸಲಹೆಗಾರ ಹುದ್ದೆಯಿಂದ ಭುಟಿಯಾ ಉಚ್ಚಾಟನೆ?
ಕೋಲ್ಕತಾ, ಮಾ.5: ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್)ನೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಭಾರತದ ಮಾಜಿ ನಾಯಕ ಬೈಚುಂಗ್ ಭುಟಿಯಾ ಇನ್ನು ಮುಂದೆ ಎಐಎಫ್‌ಎಫ್‌ನ ಸಲಹೆಗಾರನಾಗಿ ಇರುವುದಿಲ್ಲ.
ಭಾರತದ ಖ್ಯಾತ ಫುಟ್ಬಾಲ್ ಆಟಗಾರ ಭುಟಿಯಾರನ್ನು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಹುದ್ದೆಯಿಂದ ಕೆಳಗಿಳಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಭುಟಿಯಾ 2 ವರ್ಷಗಳ ಹಿಂದೆ ಎಐಎಫ್‌ಎಫ್ ಹಾಗೂ ಅದರ ಅಧ್ಯಕ್ಷ ಪ್ರಫುಲ್ ಪಟೇಲ್‌ರ ತಾಂತ್ರಿಕ ಸಲಹೆಗಾರನಾಗಿ ನೇಮಕಗೊಂಡಿದ್ದರು. ಭಾರತದ ಕೋಚ್ ಸ್ಟೀಫನ್ ಕಾನ್‌ಸ್ಟನ್‌ಟೈನ್ ಭಾರತಕ್ಕೆ ವಾಪಸಾಗಲು ಕಾರಣರಾಗಿದ್ದ ಭುಟಿಯಾ ಅವರ ಒಪ್ಪಂದದ ಅವಧಿಯನ್ನು ಫೆ.2018ರ ತನಕ ವಿಸ್ತರಿಸಲು ಶಿಫಾರಸು ಮಾಡಿದ್ದರು.
ಭುಟಿಯಾರನ್ನು ಹುದ್ದೆಯಿಂದ ಉಚ್ಚಾಟಿಸಲಾಗಿದ್ದು, ಅವರ ಒಪ್ಪಂದವನ್ನು ನವೀಕರಿಸಲಾಗಿಲ್ಲ. ಭಾರತದ ಅಂಡರ್-17 ವಿಶ್ವಕಪ್ ತಂಡಕ್ಕೆ ಕೋಚ್ ಆಯ್ಕೆ ಸಂಬಂಧಿಸಿ ಭಿನಾಭಿಪ್ರಾಯ ಉಂಟಾಗಿತ್ತು ಎನ್ನಲಾಗಿದೆ.
ಭುಟಿಯ ಅವರು ಕಾಲ್ಮ್ ಟೊಲ್‌ರನ್ನು ಕೋಚ್‌ರನ್ನು ನೇಮಕ ಮಾಡಲು ಬಯಸಿದ್ದರು. ಆದರೆ,ಎಐಎಫ್‌ಎಫ್ ಪೋರ್ಚುಗಲ್‌ನ ನಾರ್ಟನ್ ಡಿ ಮಾರ್ಟಸ್‌ರನ್ನು ಕೋಚ್ ಆಗಿ ನೇಮಕ ಮಾಡಲು ನಿರ್ಧರಿಸಿತ್ತು.





